ತುಮಕೂರು: ಈದ್ ಮಿಲಾದ್ ಹಬ್ಬದ ಪ್ರಯುಕ್ತ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶುಕ್ರವಾರ ಮೆರವಣಿಗೆ ನಡೆಯಿತು. ಬೆಳಿಗ್ಗೆಯಿಂದಲೇ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ನೆರವೇರಿತು.
ಮೊಹಮ್ಮದ್ ಪೈಗಂಬರ್ ಹುಟ್ಟಿದ ದಿನವನ್ನು ಈದ್ ಮಿಲಾದ್ ಎಂದು ಆಚರಿಸಲಾಗುತ್ತದೆ. ಪೈಗಂಬರ್ ಹೆಸರಿನಲ್ಲಿ ಮಸೀದಿಗಳಲ್ಲಿ ಅನ್ನ ಸಂತರ್ಪಣೆ ಮಾಡಲಾಯಿತು. ಮಸೀದಿಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಿದವು. ಮುಸ್ಲಿಮರು ಬೆಳಿಗ್ಗೆಯೇ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ನಗರದ ಗೂಡ್‌ಶೆಡ್ ಕಾಲೊನಿಯ ಮೀನಾ ಮಸೀದಿ ಬಳಿ ಚಾಂದಿನಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮಕ್ಕಳು, ವೃದ್ಧರು ಒಳಗೊಂಡಂತೆ ಎಲ್ಲ ವಯೋಮಾನದವರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.
ಬನಶಂಕರಿ, ಸದಾಶಿವನಗರ, ನಜರಾಬಾದ್, ಚಾಂದಿನಿ ವೃತ್ತ, ಪಿ.ಎಚ್.ಕಾಲೊನಿ, ಬಿ.ಜಿ.ಪಾಳ್ಯ ವೃತ್ತದಿಂದ ಸಂತೆಪೇಟೆ ವರೆಗೆ ಸಾಗಿತು. ಮಂಡಿಪೇಟೆ ಮುಖ್ಯ ರಸ್ತೆಯಲ್ಲಿ ಸಾಗಿ ಗುಂಚಿ ವೃತ್ತ, ಬಾರ್‌ಲೈನ್ ಮಸೀದಿ, ಬಿ.ಎಚ್.ರಸ್ತೆ ಮೂಲಕ ಕುಣಿಗಲ್ ರಸ್ತೆಯ ಈದ್ಗಾ ಮೈದಾನದ ಬಳಿ ಮುಕ್ತಾಯವಾಯಿತು.
ಟೌನ್‌ಹಾಲ್ ವೃತ್ತ, ಕಾಲ್‌ಟೆಕ್ಸ್, ಕುಣಿಗಲ್ ರಸ್ತೆ, ಬಾರ್‌ಲೈನ್ ರಸ್ತೆ, ಗುಬ್ಬಿ ಗೇಟ್, ಬಿ.ಜಿ.ಪಾಳ್ಯ ವೃತ್ತದ ಬಳಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.