ADVERTISEMENT

ಈಜಿಮೈಂಡ್ ವಂಚನೆ ಪ್ರಕರಣ: ಇಬ್ಬರ ವಿಚಾರಣೆ

ತುಮಕೂರು: ₹ 500 ಕೋಟಿಗೂ ಅಧಿಕ ಹಣ ವಂಚನೆಯ ಆರೋಪ

​ಪ್ರಜಾವಾಣಿ ವಾರ್ತೆ
Published 16 ಜೂನ್ 2019, 16:07 IST
Last Updated 16 ಜೂನ್ 2019, 16:07 IST

ತುಮಕೂರು: ನಗರದ ಈಜಿಮೈಂಡ್ ಮಾರ್ಕೆಟಿಂಗ್ ಇಂಡಿಯಾ ಪ್ರೈ.ಲಿ ಕಂಪನಿಯು ಜನರಿಗೆ ₹ 500 ಕೋಟಿಗೂ ಅಧಿಕ ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಭಾನುವಾರ ಇಬ್ಬರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

‘ತನಿಖೆ ನಡೆಸಲು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾ ರಾಣಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. ತನಿಖೆ ಪ್ರಗತಿಯಲ್ಲಿದೆ. ವಿಚಾರಣೆಗೆ ಒಳಪಡಿಸಿದವರ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಕರಣ ಸಂಬಂಧ ಭಾನುವಾರ ನಗರ ಠಾಣೆಯಲ್ಲಿ ‘₹ 15 ಲಕ್ಷ ಹೂಡಿಕೆ ಮತ್ತು 3 ತಿಂಗಳ ಲಾಭಾಂಶ ನೀಡದೆ ಕಂಪನಿ ವಂಚಿಸಿದೆ’ ಎಂದು ಮಹಿಳೆ ಶಾಜು ಅನ್ವರ್ ಪಾಷಾ ಎಂಬುವವರು ದೂರು ದಾಖಲಿಸಿದ್ದಾರೆ.

ADVERTISEMENT

ಮಹಮ್ಮದ್ ಅಸ್ಲಂ, ಆತನ ಪತ್ನಿ ಸುಫಿಯಾಖಾನಂ, ಸಂಬಂಧಿಕ ಇಬ್ರಾಹಿಂ ಖಲೀಲ್, ವ್ಯವಸ್ಥಾಪಕ ಶುಮಾಜ್ ಅಹಮ್ಮದ್, ಕಾರು ಚಾಲಕ ಅಸದ್ ಮತ್ತಿತರರು ಕಂಪನಿ ಸ್ಥಾಪಿಸಿದ್ದರು.

‘ತುಮಕೂರು ತಾಲ್ಲೂಕು ಹೊನ್ನೇನಹಳ್ಳಿಯಲ್ಲಿದ್ದ ಜಮೀನಿನ ಆದಾಯ ಮತ್ತು ಆ ಜಮೀನು ಮಾರಾಟದಿಂದ ಬಂದ ₹ 14 ಲಕ್ಷವನ್ನು 2018ರ ಆಗಸ್ಟ್‌ನಲ್ಲಿ ಹೂಡಿಕೆ ಮಾಡಿದ್ದೆವು. ಹೂಡಿಕೆ ಖಾತ್ರಿ ಬಗ್ಗೆ ರಸೀದಿ, ಹೂಡಿಕೆದಾರರ ಜೊತೆಗಿನ ಒಡಂಬಡಿಕೆ ಪತ್ರ (ಕ್ಲೈಂಟ್ ಇನ್ವೆಸ್ಟ್‌ಮೆಂಟ್ ಅಗ್ರಿಮೆಂಟ್) ನೀಡಿದ್ದಾರೆ. 2019ರ ಮಾರ್ಚ್ 11ರಂದು ಲಾಭಾಂಶ ಮತ್ತು ಹೂಡಿಕೆ ಹಣ ಕೊಡುವುದಾಗಿ ಅಸ್ಲಂ ಹೇಳಿದ್ದರು. ಆದರೆ ಈವರೆಗೂ ಹಣ ನೀಡಿಲ್ಲ. ಇದೇ ರೀತಿ ತುಮಕೂರು ಮತ್ತು ಇತರ ಸ್ಥಳಗಳ ಜನರಿಗೂ ಅಸ್ಲಂ ವಂಚಿಸಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಶಾಜು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.