ADVERTISEMENT

ಯಂತ್ರದಲ್ಲಿ ಪದೇ ಪದೇ ದೋಷ: ಮತದಾನ ವಿಳಂಬ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2019, 17:22 IST
Last Updated 18 ಏಪ್ರಿಲ್ 2019, 17:22 IST
ಕೋರ ಹೋಬಳಿ ಮೆಳೇಹಳ್ಳಿ ಮತಗಟ್ಟೆಯಲ್ಲಿ ವಿ.ವಿ ಪ್ಯಾಟ್‌ನಲ್ಲಿ ದೋಷ ಕಾಣಿಸಿಕೊಂಡಿದ್ದರಿಂದ ಮತದಾನ ಮಾಡಲು ಕಾದು ಕುಳಿತಿರುವ ಗ್ರಾಮಸ್ಥರು
ಕೋರ ಹೋಬಳಿ ಮೆಳೇಹಳ್ಳಿ ಮತಗಟ್ಟೆಯಲ್ಲಿ ವಿ.ವಿ ಪ್ಯಾಟ್‌ನಲ್ಲಿ ದೋಷ ಕಾಣಿಸಿಕೊಂಡಿದ್ದರಿಂದ ಮತದಾನ ಮಾಡಲು ಕಾದು ಕುಳಿತಿರುವ ಗ್ರಾಮಸ್ಥರು   

ಕೋರ: ಹೋಬಳಿಯ ಎರಡು ಮತಗಟ್ಟೆಯ ಮತಯಂತ್ರದಲ್ಲಿ ದೋಷ ಕಾಣಿಸಿಕೊಂಡು ಮತದಾನ ವಿಳಂಬವಾಯಿತು.

ಸೆಕ್ಟರ್ 13ರ ಮತಗಟ್ಟೆ ಸಂಖ್ಯೆ 144 ಹಾಗೂ 145ರ (ಮೆಳೇಹಳ್ಳಿ ಹಾಗೂ ಹಿರೇತೊಟ್ಲುಕೆರೆ) ಮತಗಟ್ಟೆಗಳಲ್ಲಿ ಪದೇ ಪದೇ ದೋಷ ಕಾಣಿಸಿಕೊಂಡ ಪರಿಣಾಮ ಹುರುಪಿನಿಂದ ಮತ ಚಲಾಯಿಸಲು ಬಂದಿದ್ದ ಮತದಾರರು ಗಂಟೆಗಟ್ಟಲೆ ಮತದಾನಕ್ಕೆ ಕಾದು ಕಾದು ಸುಸ್ತಾದರು.

ಮೆಳೇಹಳ್ಳಿ ಮತಗಟ್ಟೆಯಲ್ಲಿ ಬೆಳಿಗ್ಗೆ ಮತದಾನ ಪ್ರಕ್ರಿಯೆ ಆರಂಭವಾದಾಗ ತಾಂತ್ರಿಕ ದೋಷ ಕಾಣಿಸಿಕೊಂಡು ಮುಕ್ಕಾಲು ಗಂಟೆ ತಡವಾಗಿ ಮತದಾನ ಪ್ರಕ್ರಿಯೆ ಆರಂಭವಾಯಿತು. ಇದೇ ಮತಗಟ್ಟೆಯಲ್ಲಿ 12.30ರ ವೇಳೆ ಮತ್ತೊಮ್ಮೆ ವಿ.ವಿ ಪ್ಯಾಟ್‌ನಲ್ಲಿ ದೋಷ ಕಾಣಿಸಿಕೊಂಡಿತು.

ADVERTISEMENT

ಎಲೆಕ್ಟ್ರಾನಿಕ್ ಮತ ಯಂತ್ರದಲ್ಲಿ 5 ಬಾರಿ ಬಟನ್ ಒತ್ತಿದರೂ ವಿ.ವಿ ಪ್ಯಾಟ್‌ನಲ್ಲಿ ಮತದಾನದ ವಿವರ ಮೂಡುತ್ತಿರಲಿಲ್ಲ. ವಿ.ವಿ ಪ್ಯಾಟ್‌ ಅನ್ನು ಬದಲಾಯಿಸುವವರೆಗೂ ಒಂದು ಗಂಟೆ ಮತದಾನ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಈ ಅವ್ಯವಸ್ಥೆಯಿಂದ ಬೇಸತ್ತ ಮತದಾರರು ‘ಮತದಾನ ಮಾಡುವುದೂ ಬೇಡ ಈ ಗೋಳು ಬೇಡ’ ಎಂದು ಅವ್ಯವಸ್ಥೆಗೆ ಹಿಡಿ ಶಾಪ ಹಾಕಿ ತೆರಳಿದರು.

ಪದೇ ಪದೇ ಮತಯಂತ್ರ ಕೈಕೊಡುತ್ತಿರುವ ಬಗ್ಗೆ ಮತದಾರರು ಹಾಗೂ ಗ್ರಾಮಸ್ಥರು ಮತಗಟ್ಟೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು. ಕೆಲವರು ಮರು ಮತದಾನ ಮಾಡುವಂತೆ ಒತ್ತಾಯಿಸಿದರು. ಅರ್ಧ ಗಂಟೆ ಬಳಿಕ ಕೊರಟಗೆರೆಯಿಂದ ಬಂದ ಸೆಕ್ಟರ್ ಅಧಿಕಾರಿಗಳು ಹಿರೇತೊಟ್ಲುಕೆರೆ ಹಾಗೂ ಮೆಳೇಹಳ್ಳಿ ಮತಗಟ್ಟೆಗಳಲ್ಲಿ ವಿ.ವಿ ಪ್ಯಾಟ್ ಬದಲಾಯಿಸಿದರು.

ಆರು ಗಂಟೆ ಒಳಗೆ ಮತ ಕೇಂದ್ರದ ಬಳಿ ಎಷ್ಟೇ ಮತದಾರರಿದ್ದರೂ ಅವರಿಗೆ ಪಾಸ್ ನೀಡಿ ಮತದಾನ ಮಾಡಲು ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸೆಕ್ಟರ್ ಅಧಿಕಾರಿಗಳು ಸಮಜಾಯಿಷಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.