ಪಾವಗಡ: ತಾಲ್ಲೂಕಿನ ಅರಸೀಕೆರೆ ಅಂಬೇಡ್ಕರ್ ಬಡಾವಣೆ ಮನೆಗಳ ಮೇಲೆ 11 ಕೆ.ವಿ ವಿದ್ಯುತ್ ತಂತಿ ಹಾದು ಹೋಗಿದೆ. ಇದರಿಂದ ಬಡಾವಣೆ ನಿವಾಸಿಗಳು ಆತಂಕದಲ್ಲಿ ಜೀವನ ಸಾಗಿಸಬೇಕಿದೆ ಎಂದು ಬಡಾವಣೆ ನಿವಾಸಿಗಳು ಆರೋಪಿಸಿದ್ದಾರೆ.
ಸರ್ಕಾರ ಮಂಜೂರು ಮಾಡಿರುವ ಮನೆಗಳಲ್ಲಿ ದಶಕಗಳಿಂದ ವಾಸಿಸಲಾಗುತ್ತಿದೆ. ಈ ಮನೆಗಳ ಮೇಲೆ ಹೈ ವೋಲ್ಟೇಜ್ ವಿದ್ಯುತ್ ತಂತಿ ಹಾದು ಹೋಗಿವೆ. ಇವುಗಳನ್ನು ಬದಲಿಸುವಂತೆ ದೂರು ನೀಡಿದ್ದರೂ ಇಲಾಖೆಯವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದ್ದಾರೆ.
ಮನೆ ಮಹಡಿ ಮೇಲೆ ಹೋದರೆ ತಲೆಗೆ ತಗುಲುವಂತೆ ವಿದ್ಯುತ್ ತಂತಿಗಳಿವೆ. ಮಳೆ ಬಂದರೆ ಎಲ್ಲಿ ಮನೆ ಗೋಡೆಗಳಿಗೆ ವಿದ್ಯುತ್ ಪ್ರವಹಿಸಿ ಅನಾಹುತ ಸಂಭವಿಸುತ್ತದೆಯೊ ಎಂಬ ಭಯ ಇಲ್ಲಿನ ಜನರಲ್ಲಿದೆ. ಕೆಲ ವರ್ಷಗಳ ಹಿಂದೆ ಭರತ್ ಎಂಬ ಯುವಕ ಮಹಡಿ ಮೇಲೆ ಹೋದಾಗ ವಿದ್ಯುತ್ ತಂತಿಗೆ ಕೈ ತಗುಲಿ ಕೈ ಸುಟ್ಟು ಹೋಗಿತ್ತು. ಇಷ್ಟಾದರೂ ಅಧಿಕಾರಿಗಳು ತಂತಿ ಸ್ಥಳಾಂತರಿಸದೆ ಬೇಜವಾಬ್ದಾರಿ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕೂಡಲೇ ವಿದ್ಯುತ್ ತಂತಿಗಳನ್ನು ಸ್ಥಳಾಂತರಿಸಬೇಕು ಎಂದು ಬಡಾವಣೆ ನಿವಾಸಿಗಳಾದ ಶ್ರೀನಿವಾಸ್, ಕಿರಣ್, ಮಹಲಿಂಗಪ್ಪ, ಪ್ರಭಾಕರ್ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.