ತುಮಕೂರು: ಜಿಲ್ಲೆಯಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ವಿದ್ಯುತ್ ಅವಘಡದಲ್ಲಿ ಬಾಲಕ ಸೇರಿ ಇಬ್ಬರು ಸಾವಿಗೀಡಾಗಿದ್ದಾರೆ..
ತಿಪಟೂರು ತಾಲ್ಲೂಕಿನ ಕಲ್ಲಯ್ಯನಪಾಳ್ಯದಲ್ಲಿ ಮಂಗಳವಾರ ಬೆಳಿಗ್ಗೆ ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿ ಹಾಗೂ ಎರಡು ಸೀಮೆ ಹಸುಗಳು ಮೃತಪಟ್ಟಿವೆ.
ಕಲ್ಲಯ್ಯನಪಾಳ್ಯದ ನಿವಾಸಿ ಯೋಗೀಶ್ (50) ಮೃತರು. ಎಂದಿನಂತೆ ತಮ್ಮ ರಾಸುಗಳನ್ನು ಮನೆಯ ಸಮೀಪದ ತೋಟದಲ್ಲಿ ಮೇಯಿಸಲು ಹೋದಾಗ ಅವಘಡ ಸಂಭವಿಸಿದೆ. ಯೋಗೀಶ್ ಹೈನುಗಾರಿಕೆಯಿಂದ ಜೀವನ ನಡೆಸುತ್ತಿದ್ದರು. ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ನಾಗರಾಜು, ನೊಣವಿನಕೆರೆ ಪಿಎಸ್ಐ ಬಸವರಾಜು, ಬೆಸ್ಕಾಂ ಎಂಜಿನಿಯರ್ ಮನೋಹರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಾಲಕ ಸಾವು: ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಸೋಮನಹಳ್ಳಿಯಲ್ಲಿ ವಿದ್ಯುತ್ ಸ್ಪರ್ಶಿಸಿ ಬಾಲಕನೊಬ್ಬ ಸಾವನ್ನಪ್ಪಿದ್ದಾನೆ.
ಸೋಮವಾರ ಸಂಜೆ ಪೋಷಕರ ಜತೆಗೆ ಜಮೀನಿಗೆ ಹೋದಾಗ ವಿದ್ಯುತ್ ತಂತಿ ತುಂಡಾಗಿ ಬಿದ್ದಿರುವುದನ್ನು ಗಮನಿಸದೆ ತುಳಿದ ಪರಿಣಾಮ ಬಾಲಕ ಕುಶಾಲ್ (9) ಸಾವನ್ನಪ್ಪಿದ್ದಾನೆ.
ಹಳೆಯ ವಿದ್ಯುತ್ ತಂತಿ ಬದಲಾಯಿಸದ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸಾರ್ವಜನಿಕರು ಆಕ್ರೋಶಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.