ADVERTISEMENT

ಸಾಮಾಜಿಕ ನಾಟಕ ಪ್ರದರ್ಶನಕ್ಕೆ ಒತ್ತು ನೀಡಿ: ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ

ಕೊಟ್ಟೂರನಕೊಟ್ಟಿಗೆ ಗ್ರಾಮದಲ್ಲಿ ನಾಟಕ ಪ್ರದರ್ಶನ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2019, 16:29 IST
Last Updated 29 ಸೆಪ್ಟೆಂಬರ್ 2019, 16:29 IST
ಹಾರ್ಮೋನಿಯಂ ಮಾಸ್ಟರ್ ಪ್ರಕಾಶ್‌ ಆಚಾರ್ ಅವರನ್ನು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಸನ್ಮಾನಿಸಿದರು
ಹಾರ್ಮೋನಿಯಂ ಮಾಸ್ಟರ್ ಪ್ರಕಾಶ್‌ ಆಚಾರ್ ಅವರನ್ನು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಸನ್ಮಾನಿಸಿದರು   

ತುರುವೇಕೆರೆ: ’ಪ್ರಸ್ತುತ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಪೌರಾಣಿಕ ನಾಟಕಗಳಷ್ಟೇ ಸಾಮಾಜಿಕ ನಾಟಕಗಳ ಪ್ರದರ್ಶನಕ್ಕೂ ಒತ್ತು ನೀಡಬೇಕು. ಆ ಮೂಲಕ ನಾಟಕ ಕಲೆಯನ್ನು ಉಳಿಸಿ ಬೆಳೆಸಬೇಕು' ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.

ತಾಲ್ಲೂಕಿನ ಕೊಟ್ಟೂರನಕೊಟ್ಟಿಗೆ ಗ್ರಾಮದಲ್ಲಿ ಕೊಲ್ಲಾಪುರದಮ್ಮ, ಮುಳಕಟ್ಟಮ್ಮ, ಮುತ್ತುರಾಯಸ್ವಾಮಿ ಕೃಪಾಪೋಷಿತ, ಹಾಗೂ ನೆಹರು ಯುವಕ ಸಂಘದವತಿಯಿಂದ ಕಲಿತಕಳ್ಳ ಎಂಬ ಸಾಮಾಜಿಕ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಈ ನಾಟಕದ ಸಂಗೀತ ನಿರ್ದೇಶಕರಾದ ಹಾರ್ಮೋನಿಯಂ ಮಾಸ್ಟರ್ ಪ್ರಕಾಶಾಚಾರ್ ಅವರನ್ನು ಸನ್ಮಾನಿಸಿ ಮಾತನಾಡಿದರು.

‘ಗ್ರಾಮೀಣ ಪ್ರದೇಶಗಳಲ್ಲಿ ಪೌರಾಣಿಕ ನಾಟಕಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಈ ಹಿಂದೆ ಪೌರಾಣಿಕ ನಾಟಕಗಳಷ್ಟೇ ಸಾಮಾಜಿಕ ನಾಟಕಗಳಿಗೂ ಆದ್ಯತೆ ನೀಡಲಾಗುತ್ತಿತ್ತು. ಈಗಲೂ ಅದು ಮುಂದುವರಿಯಬೇಕು. ಗ್ರಾಮೀಣ ಕಲಾವಿದರು ಬೆಳಕಿಗೆ ಬರಬೇಕು’ ಎಂದರು.

ADVERTISEMENT

ದೊಡ್ಡೇಘಟ್ಟದ ಸೇವಾ ಟ್ರಸ್ಟ್ ಸಂಸ್ಥಾಪಕ ಚಂದ್ರೇಶ್ ಮಾತನಾಡಿ, ‘ಪಿತೃಪಕ್ಷ ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿದ್ದು, ಹಿರಿಯರನ್ನು ಪೂಜಿಸುವ ಸಂಪ್ರದಾಯಿಕ ಶ್ರೇಷ್ಠವಾದ ಹಬ್ಬ ಇದಾಗಿದೆ. ಇಂದಿನ ಮಕ್ಕಳಿಗೆ ತಾತ, ಮುತ್ತಾತಂದಿರ ಬಗ್ಗೆ ತಿಳಿಯಪಡಿಸಲು ಇದು ಮಹತ್ವದ ಹಬ್ಬವಾಗಿದೆ’ ಎಂದರು.

ಪಿತೃಪಕ್ಷದ ಅಂಗವಾಗಿ ಕೊಲ್ಲಾಪುರದಮ್ಮ, ಮುಳುಕಟ್ಟಮ್ಮ, ಮುತ್ತುರಾಯಸ್ವಾಮಿ ಉತ್ಸವ ಹಾಗೂ ಶ್ರೀ ಸತ್ಯಗಣಪತಿ ವಿಸರ್ಜನಾ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಸತ್ಯಗಣಪತಿ ವಿಸರ್ಜನಾ ಮಹೋತ್ಸವದ ಪ್ರಯುಕ್ತ ಭಕ್ತರಿಗೆ ಅನ್ನದಾನ ಏರ್ಪಡಿಸಲಾಗಿತ್ತು. ಭಾನುವಾರ ಬೆಳಿಗ್ಗೆ ಗಣಪತಿ ಮೂರ್ತಿಯನ್ನು ವಿಸರ್ಜಿಸಲಾಯಿತು.

ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷ ದಯಾನಂದ್, ಗೌರವ ಅಧ್ಯಕ್ಷ ನರಸಿಂಹರಾಜು, ನಿರ್ದೇಶಕರಾದ ಕೆ.ಎ.ಧರಣೇಶ್‌ಗೌಡ, ರಮೇಶ್, ರಘು, ಯೋಗೇಶ್, ತಿಮ್ಮೇಗೌಡ, ಮಧು, ಶ್ರೀನಿವಾಸ್ ಸೇರಿ ಗ್ರಾಮಸ್ಥರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.