ADVERTISEMENT

ಸಂಶೋಧನೆ ಹೆಸರಿನಲ್ಲಿ ಪರಿಸರ ನಾಶ: ನಾಗೇಶ ಹೆಗಡೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2023, 14:35 IST
Last Updated 1 ಮಾರ್ಚ್ 2023, 14:35 IST
ತುಮಕೂರು ವಿ.ವಿ ವಿಜ್ಞಾನ ಕಾಲೇಜು ಕನ್ನಡ ವಿಭಾಗ ಬುಧವಾರ ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಹಿರಿಯ ಪತ್ರಕರ್ತ ನಾಗೇಶ ಹೆಗಡೆ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ವಿಭಾಗದ ಮುಖ್ಯಸ್ಥೆ ಡಾ.ಗೀತಾ ವಸಂತ, ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಪರಿಸರವಾದಿ ಡಾ.ಕೇಶವ ಎಚ್. ಕೊರ್ಸೆ, ಪ್ರಾಂಶುಪಾಲ ಡಾ.ಪ್ರಕಾಶ್ ಎಂ.ಶೇಟ್ ಉಪಸ್ಥಿತರಿದ್ದರು
ತುಮಕೂರು ವಿ.ವಿ ವಿಜ್ಞಾನ ಕಾಲೇಜು ಕನ್ನಡ ವಿಭಾಗ ಬುಧವಾರ ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಹಿರಿಯ ಪತ್ರಕರ್ತ ನಾಗೇಶ ಹೆಗಡೆ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ವಿಭಾಗದ ಮುಖ್ಯಸ್ಥೆ ಡಾ.ಗೀತಾ ವಸಂತ, ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಪರಿಸರವಾದಿ ಡಾ.ಕೇಶವ ಎಚ್. ಕೊರ್ಸೆ, ಪ್ರಾಂಶುಪಾಲ ಡಾ.ಪ್ರಕಾಶ್ ಎಂ.ಶೇಟ್ ಉಪಸ್ಥಿತರಿದ್ದರು   

ತುಮಕೂರು: ಸಂಶೋಧನೆ ಹೆಸರಿನಲ್ಲಿ ಪರಿಸರ ನಾಶ ಮಾಡದೆ ಮನುಕುಲದ ಪ್ರಜ್ಞೆಯ ಸಂಕೇತವಾಗಿ ಕಾಪಾಡಿ, ಸಂರಕ್ಷಿಸಬೇಕು ಎಂದು ಹಿರಿಯ ಪತ್ರಕರ್ತ, ವಿಜ್ಞಾನ ಚಿಂತಕ ನಾಗೇಶ ಹೆಗಡೆ ಸಲಹೆ ಮಾಡಿದರು.

ತುಮಕೂರು ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗ ಬುಧವಾರ ಆಯೋಜಿಸಿದ್ದ ‘ಇರುವುದೊಂದೆ ಭೂಮಿ– ಭವಿಷ್ಯದ ಹಿತಕ್ಕಾಗಿ ವಿಜ್ಞಾನ’ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ವೈಜ್ಞಾನಿಕ ಮನೋಭಾವ ರೂಪಿಸಿಕೊಂಡಾಗ ಅಭಿವೃದ್ಧಿಯ ಹೊಸ ಪಥವೇ ನಿರ್ಮಾಣವಾಗಲಿದೆ ಎಂದು ಅಭಿಪ್ರಾಯಪಟ್ಟರು.

‘ಭೂಮಿಯೊಡಲ ತಲ್ಲಣಗಳು ಹಾಗೂ ಮನುಷ್ಯ ಜಗತ್ತು’ ವಿಚಾರ ಕುರಿತು ವಿಶೇಷ ಉಪನ್ಯಾಸ ನೀಡಿ, ‘ಬಂಡವಾಳಶಾಹಿ ಅರ್ಥವ್ಯವಸ್ಥೆಯೇ ಬಿಸಿ ಪ್ರಳಯಕ್ಕೆ ಕಾರಣವಾಗಿದೆ. ಜಾಗತಿಕ ತಾಪಮಾನದ ಏರಿಳಿತವನ್ನು ಹವಾಮಾನ ತಗ್ಗಿಸುವಿಕೆಯ ಮೂಲಕ ತಡೆಯಬಹುದು. ಭೂಮಿಯ ಒಡಲು ಶಾಂತಿಯನ್ನು ಬಯಸುತ್ತದೆಯೇ ಹೊರತು ವಿನಾಶವನ್ನಲ್ಲ’ ಎಂದು ಎಚ್ಚರಿಸಿದರು.

ADVERTISEMENT

ಪರಿಸರ ತಜ್ಞ ಡಾ.ಕೇಶವ ಎಚ್. ಕೊರ್ಸೆ ‘ಜೀವವೈವಿಧ್ಯ ಸಂರಕ್ಷಣೆ ಮತ್ತು ನಮ್ಮ ಬದುಕು’ ವಿಚಾರ ಕುರಿತು ಮಾತನಾಡಿ, ‘ವಿಜ್ಞಾನವೆಂದರೆ ದೃಷ್ಟಿಕೋನ. ವಿಜ್ಞಾನಕ್ಕೆ ವಿವೇಕದ ಅರಿವನ್ನು ತುಂಬಿಸಿದಾಗ ಮಾತ್ರ ಭ್ರಮ ಲೋಕದಿಂದ ಹೊರಬಂದು ವಿವೇಕಿಗಳಾಗಿ ನಮ್ಮ ಪರಿಸರ ಸಂರಕ್ಷಿಸಿಕೊಳ್ಳಲು ಸಾಧ್ಯವಾಗಲಿದೆ’ ಎಂದು ತಿಳಿಸಿದರು.

ತುಮಕೂರು ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಸಿ.ಯತಿರಾಜು ‘ಪರಿಸರದ ಸ್ವಾಸ್ಥ್ಯ– ವಿಜ್ಞಾನ ತಂತ್ರಜ್ಞಾನದ ಪರಿಣಾಮ’ ಕುರಿತು ಮಾತನಾಡಿದರು.

ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ‘ತಂತ್ರಜ್ಞಾನ ಆಧುನಿಕ ವ್ಯವಸ್ಥೆಗೆ ಒಳಪಟ್ಟ ನಂತರ ಪರಿಸರದಿಂದ ದೂರ ಉಳಿದಿದ್ದೇವೆ. ಉತ್ತಮ ಚಿಂತನೆಗಳಿಂದ ಉತ್ಕೃಷ್ಟ ಜ್ಞಾನ ಪಡೆದಾಗ ಪರಿಸರ ಸಂರಕ್ಷಣೆ ಸಾಧ್ಯವಾಗಲಿದೆ. ರಾಸಾಯನಿಕ ಬಳಸದೆ, ಪರಿಸರದ ಜತೆ ಸಾಗಬೇಕು’ ಎಂದರು.

ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜು ಪ್ರಾಂಶುಪಾಲ ಡಾ.ಪ್ರಕಾಶ್ ಎಂ.ಶೇಟ್, ವಿಜ್ಞಾನದಿಂದ ಬರುವ ಸಕಾರಾತ್ಮಕ ಅಂಶಗಳನಷ್ಟೇ ಸ್ವೀಕರಿಸೋಣ ಎಂದು ಹೇಳಿದರು.

ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಗೀತಾ ವಸಂತ ಸ್ವಾಗತಿಸಿದರು. ಉಪನ್ಯಾಸಕಿ ಆಶಾರಾಣಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.