ADVERTISEMENT

ತುಮಕೂರು | 3 ವರ್ಷದಿಂದ ಸಿಎಸ್‌ಐ ಆಸ್ಪತ್ರೆಗೆ ಸಿಗದ ಜಾಗ

ಎರಡು ಕಡೆ ಜಾಗ ಗುರುತಿಸಿದ ಕೆಐಎಡಿಬಿ; ಹಿರೇಹಳ್ಳಿ ಬಳಿ ಇಎಸ್‌ಐ ಆಸ್ಪತ್ರೆ?

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 4:13 IST
Last Updated 10 ಸೆಪ್ಟೆಂಬರ್ 2025, 4:13 IST
ತುಮಕೂರಿನ ಗಾಂಧಿನಗರದ ಇಎಸ್‌ಐ ಚಿಕಿತ್ಸಾಲಯ
ತುಮಕೂರಿನ ಗಾಂಧಿನಗರದ ಇಎಸ್‌ಐ ಚಿಕಿತ್ಸಾಲಯ   

ತುಮಕೂರು: ಕೇಂದ್ರ ಸರ್ಕಾರವು ಜಿಲ್ಲೆಗೆ ಇಎಸ್‌ಐ ಆಸ್ಪತ್ರೆ ಮಂಜೂರು ಮಾಡಿ ಮೂರು ವರ್ಷಗಳು ಕಳೆದಿದ್ದರೂ ಆಸ್ಪತ್ರೆ ನಿರ್ಮಾಣಕ್ಕೆ ಜಾಗ ಅಂತಿಮಗೊಳಿಸಲು ಜಿಲ್ಲಾ ಆಡಳಿತಕ್ಕೆ ಈವರೆಗೂ ಸಾಧ್ಯವಾಗಿಲ್ಲ. ಇದೀಗ ತಾಲ್ಲೂಕಿನ ಹಿರೇಹಳ್ಳಿ ಮತ್ತು ಚಿಕ್ಕಹಳ್ಳಿ ಬಳಿ ಹೊಸದಾಗಿ ಜಾಗ ಗುರುತಿಸುವ ಪ್ರಕ್ರಿಯೆ ನಡೆದಿದೆ.

2022ರ ಜುಲೈನಲ್ಲಿ 100 ಹಾಸಿಗೆಗಳ ಆಸ್ಪತ್ರೆ ಆರಂಭಕ್ಕೆ ಕೇಂದ್ರ ಅನುಮತಿ ನೀಡಿತ್ತು. ಅಲ್ಲಿಂದ ಈವರೆಗೆ ಆಸ್ಪತ್ರೆಗೆ ಜಾಗ ಕೊಟ್ಟಿಲ್ಲ. ಈ ಹಿಂದೆ ವಸಂತನರಸಾಪುರದ ಹತ್ತಿರ ಜಾಗ ಅಂತಿಮಗೊಳಿಸಿ ರಾಜ್ಯ ವಿಮಾ ನಿಗಮದ ಕೇಂದ್ರ ಕಚೇರಿಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ ಈ ಜಾಗದಲ್ಲಿ ಆಸ್ಪತ್ರೆ ನಿರ್ಮಿಸಲು ಅನುಮತಿ ನೀಡಲು ನಿಗಮ ನಿರಾಕರಿಸಿತು.

‘ವಸಂತನರಸಾಪುರ ಕೈಗಾರಿಕಾ ಪ್ರದೇಶವು ನಗರದಿಂದ ಸಾಕಷ್ಟು ದೂರದಲ್ಲಿದೆ. ಅಲ್ಲಿಗೆ ಸಂಚರಿಸಲು ಬಸ್‌ ಸೌಲಭ್ಯವೂ ಇಲ್ಲ. ಕಾರ್ಮಿಕರ ಓಡಾಟ ಕಷ್ಟಕರವಾಗಲಿದೆ. ಚಿಕಿತ್ಸೆ ಪಡೆಯಲು ಇಡೀ ದಿನ ವ್ಯಯಿಸಬೇಕಾಗುತ್ತದೆ. ನಗರದ ಸುತ್ತಮುತ್ತ, ವಾಹನ ಸಂಚಾರ ಇರುವ ಪ್ರದೇಶದಲ್ಲಿ ಆಸ್ಪತ್ರೆ ನಿರ್ಮಿಸಬೇಕು’ ಎಂದು ನಿಗಮವು ಸಲಹೆ ನೀಡಿತ್ತು. ಇದರಿಂದಾಗಿ ಮತ್ತೆ ಜಾಗದ ಹುಡುಕಾಟ ಮುಂದುವರಿದಿತ್ತು.

ADVERTISEMENT

‘ಕಳೆದ ಕೆಲ ದಿನಗಳ ಹಿಂದೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಅಧಿಕಾರಿಗಳು ಹಿರೇಹಳ್ಳಿಯ ರೈಲು ನಿಲ್ದಾಣದ ಪಕ್ಕ ಮತ್ತು ಚಿಕ್ಕಹಳ್ಳಿ ಬಳಿ ಸ್ಥಳ ಪರಿಶೀಲಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಿಂದ ವಿಮಾ ನಿಗಮದ ಕೇಂದ್ರ ಕಚೇರಿಗೆ ಪ್ರಸ್ತಾವ ಸಲ್ಲಿಸಲಿದ್ದು, ಕೇಂದ್ರ ಕಚೇರಿಯಿಂದ ಅನುಮತಿ ಬಂದ ನಂತರ ಕೆಲಸಗಳು ಪ್ರಾರಂಭವಾಗಲಿವೆ’ ಎಂದು ನಿಗಮದ ಮೂಲಗಳು ತಿಳಿಸಿವೆ.

‘ಹಿರೇಹಳ್ಳಿ ನಗರದಿಂದ 12 ಕಿ.ಮೀ ದೂರದಲ್ಲಿದೆ. ಇಲ್ಲಿಯೇ ಆಸ್ಪತ್ರೆ ಪ್ರಾರಂಭಿಸಿದರೆ ಎಲ್ಲರಿಗೂ ಅನುಕೂಲವಾಗಲಿದೆ. ಇದೇ ಜಾಗ ಅಂತಿಮವಾಗಬಹುದು’ ಎಂದು ನಿಗಮದ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.

ಕೈಗಾರಿಕಾ ಹಬ್‌: ಜಿಲ್ಲೆಯಲ್ಲಿ ಸಾವಿರಾರು ಎಕರೆಯಲ್ಲಿ ಕೈಗಾರಿಕೆಗಳು ತಲೆ ಎತ್ತಿವೆ. ವಸಂತನರಸಾಪುರ, ಅಂತರಸನಹಳ್ಳಿ, ಹಿರೇಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅಂತರಸನಹಳ್ಳಿಯಲ್ಲಿ ಈಗಾಗಲೇ 150 ವಿವಿಧ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಜಪಾನ್ ಟೌನ್‌ಶಿಪ್‌ ಸಹ ನಿರ್ಮಾಣವಾಗುತ್ತಿದೆ. ಜಿಲ್ಲೆ ‘ಕೈಗಾರಿಕಾ ಹಬ್‌’ ಆಗಿ ಪರಿವರ್ತನೆಯಾಗುತ್ತಿದೆ. ಆದರೆ ಇಲ್ಲಿ ಕಾರ್ಮಿಕರಿಗೆ ಅಗತ್ಯ ಸೌಲಭ್ಯ ಮಾತ್ರ ಮರೀಚಿಕೆಯಾಗಿದೆ.

‘ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾರ್ಮಿಕರು ಬಳಲುತ್ತಿದ್ದಾರೆ. ಜಿಲ್ಲೆಯಲ್ಲಿ ಲಕ್ಷಾಂತರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅವರ ಚಿಕಿತ್ಸೆಗೆ ಪ್ರತ್ಯೇಕ ಆಸ್ಪತ್ರೆ ಇಲ್ಲ. ಕೇಂದ್ರ ಸರ್ಕಾರ ಆಸ್ಪತ್ರೆ ಮಂಜೂರು ಮಾಡಿದರೂ, ಜಿಲ್ಲಾ ಆಡಳಿತ ಜಾಗ ಗುರುತಿಸುವಲ್ಲಿ ಹಿಂದೆ ಬಿದ್ದಿದೆ. ಅಲ್ಲಿ, ಇಲ್ಲಿ ಎಂದು ದಿನದೂಡುತ್ತಿದೆ’ ಎಂದು ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್‌ ಮುಜೀಬ್‌ ಆರೋಪಿಸಿದರು.

2022ರಲ್ಲಿ ಆಸ್ಪತ್ರೆ ಮಂಜೂರು 100 ಹಾಸಿಗೆಯುಳ್ಳ ಆಸ್ಪತ್ರೆ ಲಕ್ಷಾಂತರ ಕಾರ್ಮಿಕರು ಕೆಲಸ

1.13 ಲಕ್ಷ ಕಾರ್ಮಿಕರು ಜಿಲ್ಲೆಯಲ್ಲಿ 60492 ಪುರುಷರು 52884 ಮಹಿಳೆಯರು ಸೇರಿದಂತೆ ಒಟ್ಟು 113376 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದು ಇಷ್ಟು ಮಂದಿ ಇಎಸ್‌ಐ ಕಾರ್ಡ್‌ ಪಡೆದಿದ್ದಾರೆ. ಕೃಷಿಯ ನಂತರ ಕೈಗಾರಿಕಾ ಕ್ಷೇತ್ರದಲ್ಲಿ ಹೆಚ್ಚಿನ ಜನ ತೊಡಗಿಸಿಕೊಂಡಿದ್ದಾರೆ. ಸಿದ್ಧ ಉಡುಪು ತಯಾರಿಕೆ ಕಾರ್ಖಾನೆಗಳು (ಗಾರ್ಮೆಂಟ್ಸ್‌) ಸೇರಿದಂತೆ 529 ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯ ನಗರದಲ್ಲಿ ಮತ್ತು ವಸಂತನರಸಾಪುರದಲ್ಲಿ ಇಎಸ್‌ಐ ಚಿಕಿತ್ಸಾಲಯ ಪ್ರಾರಂಭಿಸಿದ್ದು ಕಾರ್ಮಿಕರಿಗೆ ಸೂಕ್ತ ಚಿಕಿತ್ಸೆ ನೀಡಲು ಆಗುತ್ತಿಲ್ಲ. ಚಿಕಿತ್ಸಾಲಯಗಳಲ್ಲಿ ವೈದ್ಯರು ಇದ್ದರೆ ಔಷಧಿ ಇರುವುದಿಲ್ಲ. ಔಷಧಿ ಇದ್ದರೆ ವೈದ್ಯರು ಇರಲ್ಲ ಎಂಬಂತಹ ಪರಿಸ್ಥಿತಿ ಇದೆ. ‘ಬೆಂಗಳೂರಿನ ನಂತರ ಜಿಲ್ಲೆ ಅತಿವೇಗವಾಗಿ ಬೆಳೆಯುತ್ತಿದೆ. ತುಮಕೂರು ನಗರವನ್ನು ಮತ್ತೊಂದು ಸಿಲಿಕಾನ್‌ ಸಿಟಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಕೇಂದ್ರ ಸಚಿವ ವಿ.ಸೋಮಣ್ಣ ಪದೇ ಪದೇ ಹೇಳುತ್ತಿದ್ದಾರೆ. ಕೇಂದ್ರದಿಂದ ಮಂಜೂರಾದ ಆಸ್ಪತ್ರೆಗೆ ಒಂದು ಜಾಗ ನಿಗದಿಪಡಿಸಿ ಕಾಮಗಾರಿ ಆರಂಭಿಸಲು ಇಚ್ಛಾಶಕ್ತಿ ತೋರದಿರುವುದು ವಿಪರ್ಯಾಸ’ ಎಂದು ಕಾರ್ಮಿಕ ಮಂಜುನಾಥ್‌ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.