
ತುಮಕೂರು: 2023ರ ಏಪ್ರಿಲ್‌ನಿಂದ 2024ರ ಮಾರ್ಚ್ ಅಂತ್ಯದ ವರೆಗೆ ಜಿಲ್ಲೆಯಾದ್ಯಂತ 19 ಸಾವಿರ ಜನ ರಕ್ತದಾನ ಮಾಡಿದ್ದಾರೆ.
ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದಿಂದ 5,711, ವಿವಿಧ ಖಾಸಗಿ ರಕ್ತನಿಧಿ ಕೇಂದ್ರಗಳಿಂದ 13,596 ಹಾಗೂ 201 ಜನ ಸ್ವಯಂ ಪ್ರೇರಿತ ರಕ್ತ ದಾನಿಗಳು ಸೇರಿ ಒಟ್ಟು 19,508 ಜನರಿಂದ ರಕ್ತ ಸಂಗ್ರಹಿಸಲಾಗಿದೆ. ಇದರಲ್ಲಿ 14 ಜನರಲ್ಲಿ ಎಚ್‍ಐವಿ ಸೋಂಕಿರುವುದು ದೃಢಪಟ್ಟಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅಸ್ಗರ್ ಬೇಗ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ರಕ್ತ ಸನ್ನದ್ಧತಾ ಪಡೆ ಸಭೆಯಲ್ಲಿ ಮಾಹಿತಿ ನೀಡಿದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಸನತ್‌ಕುಮಾರ್, ‘ಜಿಲ್ಲೆಯಲ್ಲಿ 1 ಸರ್ಕಾರಿ ರಕ್ತನಿಧಿ ಕೇಂದ್ರ, 9 ಖಾಸಗಿ ರಕ್ತನಿಧಿ ಕೇಂದ್ರ, 9 ಸರ್ಕಾರಿ ರಕ್ತ ಶೇಖರಣಾ ಘಟಕ ಹಾಗೂ 9 ಖಾಸಗಿ ರಕ್ತ ಶೇಖರಣಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಕಳೆದ ವರ್ಷ 3,452 ಯೂನಿಟ್ ರಕ್ತ ಸ್ವೀಕರಿಸಿದ್ದು, ಈ ಪೈಕಿ 3,409 ಯೂನಿಟ್ ಬಳಕೆ ಮಾಡಲಾಗಿದೆ’ ಎಂದು ಹೇಳಿದರು.
ಕಳೆದ ಎರಡು ತಿಂಗಳಲ್ಲಿ ಜಿಲ್ಲಾಸ್ಪತ್ರೆ, ಸ್ವಯಂಪ್ರೇರಿತ ರಕ್ತದಾನಿ ಹಾಗೂ ವಿವಿಧ ಖಾಸಗಿ ಬ್ಲಡ್ ಬ್ಯಾಂಕ್‌ಗಳಿಂದ ಶೇಖರಿಸಲಾದ 3,245 ಯೂನಿಟ್ ರಕ್ತದಲ್ಲಿ 4 ಪ್ರಕರಣಗಳಲ್ಲಿ ಎಚ್‍ಐವಿ ದೃಢಪಟ್ಟಿದ್ದು, ಸೋಂಕಿತರಿಗೆ ಸಮಾಲೋಚನೆ ನಡೆಸಿ ಐಸಿಟಿಸಿ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್, ‘ಜಿಲ್ಲೆಯ ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ರಕ್ತ ನಿಧಿ ಕೇಂದ್ರ ಸ್ಥಾಪನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕ್ರಮ ಕೈಗೊಳ್ಳಬೇಕು’ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.