ADVERTISEMENT

ಜಿಲ್ಲಾ ರಂಗಾಯಣ ಸ್ಥಾಪನೆ ಗುರಿ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2021, 4:12 IST
Last Updated 13 ನವೆಂಬರ್ 2021, 4:12 IST

ಚಿಕ್ಕನಾಯಕನಹಳ್ಳಿ: ‘ತುಮಕೂರು ಜಿಲ್ಲೆಯ ಮೂಲೆ ಮೂಲೆಯಲ್ಲಿರುವ ರಂಗ ಕಲಾವಿದರನ್ನು ಗುರುತಿಸಿ ರಂಗಾಯಣ ಸ್ಥಾಪನೆಯ ಗುರಿ ನನ್ನ ಮುಂದಿದೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಡಾ.ಶೈಲಾ ನಾಗರಾಜು ತಿಳಿಸಿದರು.

ತಾಲ್ಲೂಕಿನಲ್ಲಿ ಗುರುವಾರ ಮತಯಾಚನೆಯ ನಂತರ ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ತುಮಕೂರು ಬಯಲು ಸೀಮೆಯಾಗಿದೆ. ಎಲೆಮರೆಯಲ್ಲಿರುವ ನೂರಾರು ರಂಗ ಕಲಾವಿದರನ್ನು ಮುನ್ನೆಲೆಗೆ ಕರೆ ತರಲಾಗುವುದು. ಕನ್ನಡ ಉಪನ್ಯಾಸಕರು ಸೇವಾ ಭದ್ರತೆಯಿಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಪ್ರಸ್ತುತ ಅವರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಲಾಗುವುದು ಎಂದು ತಿಳಿಸಿದರು.

ADVERTISEMENT

ಜಿಲ್ಲೆಯ ಹಿರಿಯ ಸಾಹಿತಿಗಳನ್ನು ಪಟ್ಟಿ ಮಾಡಿ ಅವರೊಂದಿಗೆ ಸಂವಾದ ಹಾಗೂ ಉಪನ್ಯಾಸ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು ಎಂದರು.

ಅಲ್ಲದೇ, ಉದಯೋನ್ಮುಖ ಬರಹಗಾರರಿಗೆ ಮನ್ನಣೆ ನೀಡುವುದರ ಜತೆ ಭಾಷಾ ಕಮ್ಮಟ, ಸಂಶೋಧನಾ ಕಮ್ಮಟ, ಮಹಿಳಾ ಸಂಘಟನೆ, ಸಾಹಿತ್ಯ ಸಂಘಟನೆ, ದೇಸಿ ಉತ್ಸವ, ತಾಲ್ಲೂಕುವಾರು ಸಾಹಿತ್ಯ ಸೌರಭ ಆಚರಣೆಗೆ ಒತ್ತು ನೀಡಲಾಗುವುದು ಎಂದು
ತಿಳಿಸಿದರು.

ಗ್ರಾಮಾಂತರ ಹಾಗೂ ಹೋಬಳಿ ಕೇಂದ್ರಗಳಲ್ಲಿ ಸಾಹಿತ್ಯ ಸಮ್ಮೇಳನ, ಕನ್ನಡದ ಕಾರ್ಯಕ್ರಮ ರೂಪಿಸಲಾಗುವುದು. ಕನ್ನಡಪರ ಸಂಘಟನೆಗಳೊಂದಿಗೆ ಕೈಜೋಡಿಸಿ ಪ್ರತಿನಿತ್ಯ ಕನ್ನಡಿಗರಾಗುವಂತೆ ಪ್ರೇರೇಪಿಸುವ ಕಾರ್ಯ ಮಾಡಲಾಗುವುದು. ತಾಲ್ಲೂಕಿನ ಎಲ್ಲಾ ಮತದಾರರು ಮತ ನೀಡಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷೆ ಎನ್. ಇಂದಿರಮ್ಮ, ಕೋಶಾಧ್ಯಕ್ಷ ರಾಮಕೃಷ್ಣಪ್ಪ, ಕನ್ನಡ ಸಂಘದ ಅಧ್ಯಕ್ಷ ಸಿ.ಬಿ. ರೇಣುಕಸ್ವಾಮಿ, ಕಾರ್ಯದರ್ಶಿ ಕೆ.ಜಿ. ಕೃಷ್ಣೇಗೌಡ, ತರಬೇನಹಳ್ಳಿ ಷಡಾಕ್ಷರಿ
ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.