ADVERTISEMENT

ಎಕ್ಸ್‌ಪ್ರೆಸ್‌ ಕೆನಾಲ್‌: ಸಂಘಟನೆ ಬೆಂಬಲ

​ಪ್ರಜಾವಾಣಿ ವಾರ್ತೆ
Published 14 ಮೇ 2024, 9:14 IST
Last Updated 14 ಮೇ 2024, 9:14 IST
ತುಮಕೂರಿನಲ್ಲಿ ಸೋಮವಾರ ನಡೆದ ಸಭೆಯಲ್ಲಿ ಕನ್ನಡ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಧನಿಯಕುಮಾರ್ ಮಾತನಾಡಿದರು. ವಿವಿಧ ಸಂಘಟನೆಗಳ ಮುಖಂಡರಾದ ಬಸವರಾಜು, ಆರಾಧ್ಯ, ಪ್ರಕಾಶ್‌, ವೀರೇಂದ್ರ ಪ್ರಸಾದ್‌, ಮೀಸೆ ಸತೀಶ್ ಇತರರು ಹಾಜರಿದ್ದರು
ತುಮಕೂರಿನಲ್ಲಿ ಸೋಮವಾರ ನಡೆದ ಸಭೆಯಲ್ಲಿ ಕನ್ನಡ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಧನಿಯಕುಮಾರ್ ಮಾತನಾಡಿದರು. ವಿವಿಧ ಸಂಘಟನೆಗಳ ಮುಖಂಡರಾದ ಬಸವರಾಜು, ಆರಾಧ್ಯ, ಪ್ರಕಾಶ್‌, ವೀರೇಂದ್ರ ಪ್ರಸಾದ್‌, ಮೀಸೆ ಸತೀಶ್ ಇತರರು ಹಾಜರಿದ್ದರು   

ತುಮಕೂರು: ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್‌ ಕೆನಾಲ್‌ (ಕುಣಿಗಲ್– ಮಾಗಡಿ ಮಾರ್ಗ) ಕಾಮಗಾರಿ ನಿಲ್ಲಿಸುವಂತೆ ಹೇಮಾವತಿ ಹೋರಾಟ ಸಮಿತಿ ಕೈಗೊಂಡಿರುವ ಹೋರಾಟಕ್ಕೆ ಕನ್ನಡಪರ ಸಂಘಟನೆಗಳು, ವಿವಿಧ ಸಂಘ–ಸಂಸ್ಥೆಗಳ ಪ್ರಮುಖರು ಬೆಂಬಲ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸೋಮವಾರ ವಿವಿಧ ಸಂಘಟನೆಗಳ ಮುಖಂಡರು ಸಭೆ ಸೇರಿ ತಮ್ಮ ತೀರ್ಮಾನ ಪ್ರಕಟಿಸಿದರು. ಎಕ್ಸ್‌ಪ್ರೆಸ್‌ ಲಿಂಕ್‌ ಕೆನಾಲ್‌ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿದರು. ಕಾಮಗಾರಿ ನಿಲ್ಲಿಸುವ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಾಗುವುದು ಎಂದು ತಿಳಿಸಿದರು.

‘ಜಿಲ್ಲೆಗೆ ನಿಗದಿಯಾಗಿರುವಷ್ಟು ಹೇಮಾವತಿ ನೀರನ್ನು ಈವರೆಗೂ ಹರಿದಿಲ್ಲ. ಈಗ ನಾಲೆಯ ಮಧ್ಯಭಾಗದಿಂದ ಪೈಪ್‌ಲೈನ್‌ ಮೂಲಕ ನಮ್ಮ ಜಿಲ್ಲೆಯ ನೀರನ್ನು ಬೇರೆ ಜಿಲ್ಲೆಗೆ ತೆಗೆದುಕೊಂಡು ಹೋಗಲು ಮುಂದಾಗಿರುವುದು ಖಂಡನೀಯ’ ಎಂದು ಕನ್ನಡ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಧನಿಯಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಈ ಹೋರಾಟದಲ್ಲಿ ಭಾಗಿಯಾಗುವಂತೆ ಹೊಟೇಲ್, ಬಸ್, ಟ್ಯಾಕ್ಸಿ, ಆಟೊ ಮಾಲೀಕರು ಮತ್ತು ಚಾಲಕರ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಮನವಿ ಮಾಡಲಾಗಿದೆ. ಮೇ 16ರಂದು ನಡೆಯುವ ಪ್ರತಿಭಟನೆಯಲ್ಲಿ ಸುಮಾರು 20 ಸಾವಿರ ಜನರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಸವರಾಜು, ‘ಈ ಹಿಂದೆ ಕಾರೇಹಳ್ಳಿ ಮುಖ್ಯ ತಿರುವು ಮೂಲಕ ಮಾಗಡಿಗೆ ನೀರು ತೆಗೆದುಕೊಂಡು ಹೋಗುವುದನ್ನು ತಡೆಯಲಾಯಿತು. ಈಗ ಡಿ.ರಾಂಪುರ ಬಳಿಯಿಂದ ಪೈಪ್‌ಲೈನ್‌ ಮುಖಾಂತರ ನೀರು ತೆಗೆದುಕೊಂಡು ಹೋಗಲು ಮುಂದಾಗಿದ್ದಾರೆ. ಇದರ ಹಿಂದೆ ರಾಮನಗರ ಜಿಲ್ಲೆಯ ಜನಪ್ರತಿನಿಧಿಗಳ ಸ್ವಹಿತಾಸಕ್ತಿ ಅಡಗಿದೆ. ಇದು ಸಾಕಾರಗೊಂಡರೆ ಜಿಲ್ಲೆಯ ಜನರು ಕುಡಿಯುವ ನೀರಿಗೂ ಪರದಾಡಬೇಕಾಗುತ್ತದೆ’ ಎಂದರು.

ಭಗತ್ ಕ್ರಾಂತಿ ಸೇನೆ ಅಧ್ಯಕ್ಷ ಆರಾಧ್ಯ, ಕನ್ನಡ ಮತ್ತು ಸಂಸ್ಕೃತಿ ವೇದಿಕೆಯ ಪ್ರಕಾಶ್‌, ಜಿಲ್ಲಾ ಸ್ಪೋರ್ಟ್ಸ್‌ ಕ್ಲಬ್‌ ಅಧ್ಯಕ್ಷ ವೀರೇಂದ್ರ ಪ್ರಸಾದ್‌, ಅಖಿಲ ಕರ್ನಾಟಕ ಕಾರ್ಮಿಕರ ಪ್ರಜಾ ವೇದಿಕೆ ಅಧ್ಯಕ್ಷ ಮೀಸೆ ಸತೀಶ್, ಕರ್ನಾಟಕ ರಕ್ಷಣಾ ವೇದಿಕೆಯ ಅರುಣ್‍ಕುಮಾರ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ಬಾಲಕೃಷ್ಣ ಇತರರು ಸಭೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.