ತುಮಕೂರು: ಜಿಲ್ಲಾ ಆಸ್ಪತ್ರೆಯಲ್ಲಿ ಮಂಡಿ ಶಸ್ತ್ರ ಚಿಕಿತ್ಸೆ ಮಾಡಲು ರೋಗಿಗಳಿಂದ ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪ ಕೇಳಿ ಬಂದಿದೆ.
‘ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಗ್ರಾಮದ ಓಬಳನರಸಯ್ಯ ಎಂಬುವರು ಕಳೆದ 20 ದಿನಗಳ ಹಿಂದೆ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಪರೇಷನ್ ಮಾಡಬೇಕಿದೆ ಎಂದು ವೈದ್ಯರು ತಿಳಿಸಿದ್ದರು. ಆಯುಷ್ಮಾನ್ ಯೋಜನೆಯಡಿ ಪರಿಕರ ಸರಬರಾಜು ಮಾಡುವ ಟೆಂಡರ್ ಮುಗಿದಿದ್ದು, ಹೊರಗಡೆಯಿಂದ ಪರಿಕರ ತರಿಸಬೇಕು. ಅದಕ್ಕಾಗಿ ₹10 ಸಾವಿರ ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದರು. ರೋಗಿಯಿಂದ ಮುಂಗಡವಾಗಿ ₹2 ಸಾವಿರ ಪಡೆದಿದ್ದರು’ ಎನ್ನಲಾಗಿದೆ.
‘ಈ ವಿಷಯವನ್ನು ಜಿಲ್ಲಾ ಶಸ್ತ್ರಚಿಕಿತ್ಸಕರ ಗಮನಕ್ಕೆ ತರಲಾಯಿತು. ನಂತರ ರೋಗಿಗಳಿಂದ ಪಡೆದ ಹಣ ವಾಪಸ್ ಕೊಡಿಸಿದ್ದಾರೆ’ ಎಂದು ಸಾಮಾಜಿಕ ಹೋರಾಟಗಾರ ಹಂದ್ರಾಳ್ ನಾಗಭೂಷಣ್ ತಿಳಿಸಿದ್ದಾರೆ.
‘ಆಯುಷ್ಮಾನ್ ಯೋಜನೆಯಡಿ ದಾಖಲಾಗುವ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ವೈದ್ಯರು ಹಣ ಪಡೆದಿಲ್ಲ. ಆಪರೇಷನ್‌ಗೆ ಅಗತ್ಯ ಪರಿಕರ ಸರಬರಾಜು ಮಾಡುವ ಟೆಂಡರ್ ಮುಗಿದಿದ್ದರಿಂದ ರೋಗಿಗಳ ಹಣದಲ್ಲಿ ಪರಿಕರ ತರಿಸಿ, ಹಣವನ್ನು ಮತ್ತೆ ಅವರ ಖಾತೆಗೆ ವರ್ಗಾಯಿಸಲಾಗುತ್ತದೆ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅಸ್ಗರ್‌ಬೇಗ್ ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.