ADVERTISEMENT

‘ಆರೋಗ್ಯ ತುಮಕೂರು’ ಅಭಿಯಾನದಡಿ ನೇತ್ರ ತಪಾಸಣೆ: 5,500 ಜನರಿಗೆ ಕಣ್ಣಿನಲ್ಲಿ ಪೊರೆ

31 ಸಾವಿರ ಮಂದಿಗೆ ಮಧುಮೇಹ; 37 ಸಾವಿರ ಜನರಲ್ಲಿ ರಕ್ತದೊತ್ತಡ

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 14:38 IST
Last Updated 22 ಜುಲೈ 2024, 14:38 IST
ಕಣ್ಣು
ಕಣ್ಣು   

ತುಮಕೂರು: ಜಿಲ್ಲೆಯಲ್ಲಿ ‘ಆರೋಗ್ಯ ತುಮಕೂರು’ ಅಭಿಯಾನದಡಿ ಉಚಿತವಾಗಿ ನೇತ್ರ ತಪಾಸಣಾ ಶಿಬಿರಗಳನ್ನು ನಡೆಸಿದ ಸಮಯದಲ್ಲಿ 5,500 ಜನರಿಗೆ ಕಣ್ಣಿನಲ್ಲಿ ಪೊರೆ ಇರುವುದು ಪತ್ತೆಯಾಗಿದೆ.

ಎಲ್ಲರಿಗೂ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಅಗತ್ಯವಿದ್ದು, ಅಭಿಯಾನದ ಭಾಗವಾಗಿ ಆಗಸ್ಟ್‌ನಲ್ಲಿ ಶಿಬಿರಗಳನ್ನು ಆಯೋಜಿಸುವ ಮೂಲಕ ಮೊದಲ ಹಂತದಲ್ಲಿ ಒಂದು ಸಾವಿರ ಮಂದಿಯ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಎನ್‍ಜಿಒ, ವಿವಿಧ ಆಸ್ಪತ್ರೆಗಳ ಪ್ರತಿನಿಧಿಗಳ ಜತೆ ಸಭೆ ನಡೆಸಿದರು.

ADVERTISEMENT

ಆರೋಗ್ಯ ಅಭಿಯಾನದ ಭಾಗವಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಈಗಾಗಲೇ ಉಚಿತ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಕಳೆದ ಡಿಸೆಂಬರ್‌ನಿಂದ ಈವರೆಗೆ 5,11,026 ಜನರ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಈ ಪೈಕಿ 30 ವರ್ಷ ಮೇಲ್ಪಟ್ಟ 3,75,695 ಜನರ ತಪಾಸಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

31,066 ಮಂದಿಯಲ್ಲಿ ಮಧುಮೇಹ, 37,965 ಜನರಲ್ಲಿ ಅಧಿಕ ರಕ್ತದೊತ್ತಡ ಇರುವುದು ಕಂಡುಬಂದಿದೆ. ಸಂಶಯಾತ್ಮಕವಾಗಿ 182 ಬಾಯಿ ಕ್ಯಾನ್ಸರ್, 67 ಸ್ತನ ಕ್ಯಾನ್ಸರ್, 79 ಗರ್ಭಕಂಠ ಕ್ಯಾನ್ಸರ್, 5,555 ಕಣ್ಣಿನ ಪೊರೆ, 2,978 ದೃಷ್ಠಿದೋಷ, 570 ರಕ್ತ ಹೀನತೆ, 849 ಕ್ಷಯ, 974 ದಂತ ಸಮಸ್ಯೆ, 187 ಕುಷ್ಠ ರೋಗಿಗಳು ಇರುವುದು ತಪಾಸಣೆ ಸಮಯದಲ್ಲಿ ಪತ್ತೆ ಹಚ್ಚಲಾಗಿದೆ ಎಂದು ವಿವರಿಸಿದರು.

ಶ್ರದ್ಧಾ ಐ ಕೇರ್, ಮೋದಿ ಕಣ್ಣಿನ ಆಸ್ಪತ್ರೆ, ಶಂಕರ್, ಸಿದ್ಧಗಂಗಾ, ಶ್ರೀದೇವಿ, ಸಿದ್ಧಾರ್ಥ, ವೆಸ್ಟ್ ಲಯನ್ಸ್, ಶಾರದ ದೇವಿ, ಎಂ.ಎಸ್.ರಾಮಯ್ಯ, ಕಿಮ್ಸ್, ಏಮ್ಸ್, ನೇತ್ರದೀಪ್, ಮೊದಲಾದ ಆಸ್ಪತ್ರೆಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.