ತುಮಕೂರು: ತಾಲ್ಲೂಕಿನ ರಂಗಯ್ಯನಪಾಳ್ಯದ ಮಹಿಳೆಯೊಬ್ಬರು ಫೇಸ್‌ಬುಕ್‌ನಲ್ಲಿ ಪರಿಚಯವಾದ ಸ್ನೇಹಿತನನ್ನು ನಂಬಿ ₹8 ಲಕ್ಷ ಮೌಲ್ಯದ ಚಿನ್ನಾಭರಣ, ₹11 ಸಾವಿರ ಹಣ ಕಳೆದುಕೊಂಡಿದ್ದಾರೆ.
‘ಫೇಸ್‌ಬುಕ್‌ನಲ್ಲಿ ‘ಅರುಣ್ ಪ್ರಿನ್ಸ್’ ಎಂಬ ಖಾತೆಯ ಸ್ನೇಹಿತನ ಪರಿಚಯವಾಗಿದ್ದು, ಎರಡು ತಿಂಗಳು ಮೊಬೈಲ್‌ನಲ್ಲಿ ಮಾತನಾಡಿದ್ದೇವೆ. ಅರುಣ್ ಹಣದ ಅಗತ್ಯವಿದೆ ಎಂದು ಚಿನ್ನಾಭರಣ ಪಡೆದು ವಂಚಿಸಿದ್ದಾನೆ’ ಎಂದು ಮಹಿಳೆ ನೀಡಿದ ದೂರಿನ ಮೇರೆಗೆ ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಹಣದ ಅವಶ್ಯಕತೆ ಇದೆ ಎಂದು ಅರುಣ್ ಕೇಳಿದ್ದರು, ನನ್ನ ಬಳಿ ಹಣವಿಲ್ಲ ಎಂದು ಹೇಳಿದ್ದೆ. ಒಡವೆ ಇದ್ದರೆ ಕೊಡು, ಕೆಲಸ ಮುಗಿದ ನಂತರ ಬಿಡಿಸಿ ಕೊಡುತ್ತೇನೆ ಎಂದಿದ್ದರು. ಇದಕ್ಕೆ ನಾನು ಒಪ್ಪಿಕೊಂಡಿದ್ದೆ. ನನಗೆ ನಿಮ್ಮ ಮನೆಯ ಬಳಿಗೆ ಬರಲು ಆಗುವುದಿಲ್ಲ, ನನ್ನ ಸ್ನೇಹಿತನನ್ನು ಕಳುಹಿಸಿಕೊಡುತ್ತೇನೆ, ಆತನಿಗೆ ಒಡವೆ ನೀಡುವಂತೆ ಅರುಣ್ ತಿಳಿಸಿದ್ದ, ಅದರಂತೆ ಆಭರಣ ಕೊಟ್ಟಿದ್ದೆ’ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
64 ಗ್ರಾಂ ಚಿನ್ನದ ಸರ, 28 ಗ್ರಾಂ ಕೈ ಸರ ಮತ್ತು ₹11 ಸಾವಿರ ನಗದು ಪ್ಲಾಸ್ಟಿಕ್ ಕವರ್‌ನಲ್ಲಿ ಹಾಕಿ, ಮನೆ ಮುಂಭಾಗದ ರಸ್ತೆಗೆ ಎಸೆದಿದ್ದೆ, ಅಲ್ಲಿಯೇ ನಿಂತಿದ್ದ ಅರುಣ್ ಹೇಳಿದ ವ್ಯಕ್ತಿ ಕವರ್ ತೆಗೆದುಕೊಂಡು ಹೋದರು. ಇದರ ನಂತರ ಅರುಣ್‌ಗೆ ವಿಚಾರಿಸಿದಾಗ ಕವರ್ ತಲುಪಿರುವುದಾಗಿ ತಿಳಿಸಿದ್ದರು. ಘಟನೆಯಾದ ಒಂದು ವಾರದ ನಂತರ ನನ್ನ ನಂಬರ್ ಬ್ಲ್ಯಾಕ್ ಮಾಡಿದ್ದಾರೆ. ಇದುವರೆಗೆ ಕರೆ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಹಣ, ಬಂಗಾರದ ಒಡವೆ ಪಡೆದು, ಮೋಸ ಮಾಡಿದ ಅರುಣ್ ಪ್ರಿನ್ಸ್ ಎಂಬಾತನನ್ನು ಪತ್ತೆ ಹಚ್ಚಿ, ಕಾನೂನು ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.