ADVERTISEMENT

‘ಕೋವಿಡ್ ನಿರ್ವಹಿಸುವಲ್ಲಿ ವಿಫಲ’

​ಪ್ರಜಾವಾಣಿ ವಾರ್ತೆ
Published 21 ಮೇ 2021, 16:54 IST
Last Updated 21 ಮೇ 2021, 16:54 IST
ತುಮಕೂರಿನಲ್ಲಿ ಕಾಂಗ್ರೆಸ್ ಮುಖಂಡರು ದಿ.ರಾಜೀವ್ ಗಾಂಧಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು
ತುಮಕೂರಿನಲ್ಲಿ ಕಾಂಗ್ರೆಸ್ ಮುಖಂಡರು ದಿ.ರಾಜೀವ್ ಗಾಂಧಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು   

ತುಮಕೂರು: ಕೋವಿಡ್ ಎರಡನೇ ಅಲೆಯಿಂದ ಜನಜೀವನದ ಮೇಲೆ ಉಂಟಾಗಿರುವ ದುಷ್ಪರಿಣಾಮ ನಿಭಾಯಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಗಳು ವಿಫಲವಾಗಿದೆ ಎಂದು ಶಾಸಕ ಜಿ.ಪರಮೇಶ್ವರ ಆರೋಪಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಜೀವ್ ಗಾಂಧಿ 31ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರು, ಆಸ್ಪತ್ರೆಗಳ ಸಿಬ್ಬಂದಿ, ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವಲ್ಲಿ ಸರ್ಕಾರಗಳು ಸೋತಿವೆ. ಈ ವಿಚಾರವನ್ನು ಜನಸಾಮಾನ್ಯರೇ ಬೀದಿಯಲ್ಲಿ ನಿಂತು ಹೇಳುತ್ತಿದ್ದಾರೆ ಎಂದು ತಿಳಿಸಿದರು.

ADVERTISEMENT

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸರ್ಜೇವಾಲ ಅವರು ರಾಜ್ಯದ ಎಲ್ಲಾ ಜಿಲ್ಲಾ ಘಟಕಗಳ ಅಧ್ಯಕ್ಷರು, ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರ ಜತೆ ಜೂಮ್ ಮೀಟಿಂಗ್ ನಡೆಸಿದರು. ಸಂಕಷ್ಟಕ್ಕೆ ಒಳಗಾದವರಿಗೆ ತಮ್ಮ ಕೈಲಾದ ಸಹಾಯ ಮಾಡುವಂತೆ ನಿರ್ದೇಶನ ನೀಡಿದ್ದಾರೆ. ಅವರ ಸಲಹೆಯಂತೆ ನಮ್ಮ ಕೈಲಾದಷ್ಟು ಜನರಿಗೆ ದಿನಸಿ ಕಿಟ್, ಔಷಧಿ, ಅಗತ್ಯ ಸಲಕರಣೆಗಳನ್ನು ನೀಡುವ ಮೂಲಕ ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸಬೇಕು. ಜನರ ಜೀವ ಉಳಿಸುವ ಕೆಲಸ ಮಾಡಬೇಕಾಗಿದೆ ಎಂದು ಸಲಹೆ ಮಾಡಿದರು.

ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಸೇವೆಯನ್ನು ನೆನಪು ಮಾಡಿಕೊಂಡರು. ವಿಜ್ಞಾನ, ತಂತ್ರಜ್ಞಾನದ ಮೂಲಕ ದೇಶವನ್ನು ವೈಜ್ಞಾನಿಕ ತಳಹದಿಯಲ್ಲಿ ಕಟ್ಟುವ ಮಹದಾಸೆಯನ್ನು ಹೊಂದಿದ್ದರು ಎಂದು ಸ್ಮರಿಸಿದರು.

ರಾಜೀವ್‍ ಗಾಂಧಿ ಸಾವಿನ ನಂತರ ಅವರ ಪತ್ನಿ ಸೋನಿಯಾ ಗಾಂಧಿ ಸತತ 18 ವರ್ಷಗಳ ಕಾಲ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ, ಯುಪಿಎ ಅಧಿಕಾರದ ಅವಧಿಯಲ್ಲಿ ಪ್ರಧಾನಮಂತ್ರಿ ಮನಮೋಹನ್‍ ಸಿಂಗ್ ಅವರ ನೇತೃತ್ವದಲ್ಲಿ ದೇಶದಉನ್ನತಿಗಾಗಿ ದುಡಿದರು. ಪ್ರಸ್ತುತ ಸಹ ಎಐಸಿಸಿ ಹಂಗಾಮಿ ಅಧ್ಯಕ್ಷರಾಗಿ ದೇಶ ಹೆಮ್ಮೆ ಪಡುವಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಮೌನಿ ಪ್ರಧಾನಿ ಎಂದು ಟೀಕೆಗೆ ಒಳಗಾಗಿದ್ದ ಮನಮೋಹನ್‍ ಸಿಂಗ್ ಅವರ ಬಗ್ಗೆಇಂದು ಬಿಜೆಪಿ ಮುಖಂಡರೇ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ವೇಳೆ ಕಾಂಗ್ರೆಸ್ ಜಿಲ್ಲಾ ಕಾರ್ಮಿಕ ವಿಭಾಗದ ಅಧ್ಯಕ್ಷ ಜಿ.ಅಬ್ದುಲ್ ರಹೀಂ, ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಕಾಯದರ್ಶಿ ವಿ.ಎಸ್.ಸೈಯದ್ ದಾದಾಪೀರ್ ಅವರು ಕಾಂಗ್ರೆಸ್ ಜಿಲ್ಲಾ ಘಟಕದ ವತಿಯಿಂದ ತೆರೆದಿರುವ ಕೋವಿಡ್ ಸಹಾಯವಾಣಿ ಮೂಲಕ ಕೈಗೊಂಡಿರುವ ಕಾರ್ಯಗಳ ಬಗ್ಗೆ ವಿವರಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ರಾಮಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಎಸ್.ಷಪಿಅಹಮದ್, ರಫೀಕ್ ಅಹಮದ್, ಎಚ್.ಸಿ.ಹನುಮಂತಯ್ಯ, ಚಂದ್ರಶೇಖರಗೌಡ, ರೇವಣ್ಣಸಿದ್ದಯ್ಯ, ಸಂಜೀವ್‍ ಕುಮಾರ್, ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷರಾದ ಆಟೊರಾಜು, ಮೆಹಬೂಬ್ ಪಾಷ, ಪಾಲಿಕೆ ಸದಸ್ಯರಾದ ಟಿ.ಎಂ.ಮಹೇಶ್, ಓಬಿಸಿ ಘಟಕದ ಅಧ್ಯಕ್ಷ ಪುಟ್ಟರಾಜು, ಮಹಿಳಾ ಘಟಕದ ನಾಗಮಣಿ, ಎಸ್.ಸಿ ಘಟಕದ ಗೂಳರಿವೆ ನಾಗರಾಜು, ವಕ್ತಾರರಾದ ಸುಜಾತ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.