
ತುಮಕೂರು: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಾಂಬ್ ಇಡಲಾಗಿದೆ ಎಂದು ಮಂಗಳವಾರ ಬೆಳಗ್ಗೆ ಜಿಲ್ಲಾಧಿಕಾರಿ ಅಧಿಕೃತ ಮೇಲ್‌ಗೆ ಬೆದರಿಕೆಯ ಸಂದೇಶ ಬಂದಿದ್ದು, ಪೊಲೀಸರ ಪರಿಶೀಲನೆ ನಂತರ ಇದು ಹುಸಿ ಬಾಂಬ್ ಬೆದರಿಕೆ ಸಂದೇಶ ಎಂಬುವುದು ತಿಳಿಯಿತು.
ಬೆಳಗ್ಗೆ 6.59ಕ್ಕೆ ಮೇಲ್ ಬಂದಿದೆ. ಜಿಲ್ಲಾಧಿಕಾರಿ ಸಿಬ್ಬಂದಿ ಬೆಳಿಗ್ಗೆ 8.30ರ ವೇಳೆಗೆ ಇದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಾಂಬ್ ನಿಷ್ಕ್ರಿಯ ದಳ, ಪೊಲೀಸರು ಮಧ್ಯಾಹ್ನ 12 ಗಂಟೆಗೆ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಕಚೇರಿಯಿಂದ ಹೊರಗಡೆ ಕಳುಹಿಸಿ ಪರಿಶೀಲನೆ ನಡೆಸಿದರು. ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು.
ಬಾಂಬ್ ಬೆದರಿಕೆಯ ವಿಷಯ ತಿಳಿಯದೆ ಕಚೇರಿ ಒಳಗಡೆ ಹೋಗಲು ಮುಂದಾದ ಜನರನ್ನು ಪೊಲೀಸರು ತಡೆದರು. ಹೆಚ್ಚಿನ ಸಂಖ್ಯೆಯ ಜನರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಮಾವಣೆಗೊಂಡಿದ್ದರು. ಮುಂಜಾಗ್ರತಾ ಕ್ರಮವಾಗಿ ಅಗ್ನಿಶಾಮಕ ವಾಹನ, ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು.
ಕಚೇರಿ ಸಭಾಂಗಣ, ಶೌಚಾಲಯ, ಕಸದ ಬುಟ್ಟಿ, ವಾಹನ ನಿಲುಗಡೆ ಸ್ಥಳ ಸೇರಿದಂತೆ ಆವರಣದ ವಿವಿಧೆಡೆ ಪರಿಶೀಲನೆ ನಡೆಸಲಾಯಿತು. ಇಡೀ ಕಟ್ಟಡದ ಪರಿಶೀಲನಾ ಕಾರ್ಯ ಮುಗಿದ ನಂತರ ಅಧಿಕಾರಿ, ಸಿಬ್ಬಂದಿ ಮತ್ತು ಜನರನ್ನು ಪರಿಶೀಲಿಸಿ ಕಚೇರಿ ಒಳಗಡೆ ಬಿಡಲಾಯಿತು. ಬೆಳಗ್ಗೆಯೇ ವಿಷಯ ತಿಳಿದಿದ್ದರಿಂದ ಹೆಚ್ಚಿನ ಜನ ಕಚೇರಿ ಒಳಗಡೆ ಇರಲಿಲ್ಲ. ಇಬ್ಬರು ಕಂಪ್ಯೂಟರ್ ಆಪರೇಟರ್‌ಗಳು ಮಾತ್ರ ಇದ್ದರು.
‘ತಮಿಳರು ಮತ್ತು ಪಾಕಿಸ್ತಾನಿಗಳ ಸೇಡು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಶೀಘ್ರದಲ್ಲೇ ಬಾಂಬ್ ಸ್ಫೋಟವಾಗಲಿದೆ. ಎಲ್ಲರನ್ನೂ ಬೇಗ ತೆರವುಗೊಳಿಸಿ ಎಂಬ ಸಂದೇಶ ಕನ್ನಡ, ಇಂಗ್ಲಿಷ್ ಭಾಷೆಯಲ್ಲಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಬಾಂಬ್ ಇರುವ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಮುಂದಿನ ಮೂರು ದಿನಗಳು ಹೈ ಅಲರ್ಟ್‌ನಲ್ಲಿ ಇರುತ್ತೇವೆ. ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತಲಿನ ಕಚೇರಿಗಳಲ್ಲಿ ಪರಿಶೀಲನೆ ನಡೆಸಲಾಗುವುದು. ಸಂದೇಶ ಬಂದಿರುವ ಬಗ್ಗೆ ಪರಿಶೀಲಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ತಿಳಿಸಿದರು.
ಸುದ್ದಿಗಾರರ ಜತೆ ಮಾತನಾಡಿ ‘ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಲ್ಲ ಕಡೆ ಪರಿಶೀಲನೆ ನಡೆಸಲಾಗಿದೆ. ಬಾಂಬ್ ಇರುವ ಬಗ್ಗೆ ಸುಳಿವು ದೊರೆತಿಲ್ಲ. ಅಧಿಕಾರಿಗಳಿಂದ ದೂರು ಪಡೆದು ಪ್ರಕರಣ ದಾಖಲಿಸಲಾಗುವುದು. ಯಾರು ಸಂದೇಶ ಕಳುಹಿಸಿದ್ದು ಯಾವ ಉದ್ದೇಶಕ್ಕೆ ಹೀಗೆ ಮಾಡಿದರು ಎಂಬುವುದು ತನಿಖೆ ನಂತರವೇ ಗೊತ್ತಾಗಲಿದೆ’ ಎಂದರು.
ಜಿಲ್ಲಾಧಿಕಾರಿ ಕಚೇರಿ ಸಿ.ಸಿ ಟಿ.ವಿ ಪರಿಶೀಲಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬಸ್ ನಿಲ್ದಾಣ ರೈಲು ನಿಲ್ದಾಣ ಆಸ್ಪತ್ರೆ ಸೇರಿದಂತೆ ಜನಸಂದಣಿ ಹೆಚ್ಚಿರುವ ಕಡೆಗಳಲ್ಲಿ ಪರಿಶೀಲನೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.