ಕೊಡಿಗೇನಹಳ್ಳಿ: ರೈತರಿಂದ ಮೆಕ್ಕೆಜೋಳ ಖರೀದಿಸಿದ ವರ್ತಕರು ಸಕಾಲಕ್ಕೆ ಹಣ ಕೊಡದೆ ಸುಮಾರು 9 ತಿಂಗಳಿನಿಂದ ಸತಾಯಿಸುತ್ತಿದ್ದಾರೆಂದು ಆರೋಪಿಸಿ ಮಂಗಳವಾರ ವರ್ತಕರ ವಿರುದ್ಧ ರೈತ ಸಂಘದ ಮುಖಂಡರು ಹಾಗೂ ರೈತರು ಕೊಡಿಗೇನಹಳ್ಳಿ ಪೊಲೀಸ್ ಠಾಣೆ ಬಳಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.
ಗೌರಿಬಿದನೂರು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಲೋಕೇಶ್ ಗೌಡ ಮಾತನಾಡಿ, ಗೌರಿಬಿದನೂರು ಜಾಲಹಳ್ಳಿ ಗ್ರಾಮದ ಲಿಂಗೇಗೌಡ ಎಂಬಾತ ಗೌರಿಬಿದನೂರಿನ ಹಂಪಸಂದ್ರ, ಜಾಲಹಳ್ಳಿ, ರಮಾಪುರ, ಚಂದನದೂರು, ಬಿಸಿಲಹಳ್ಳಿ, ಕೊಡಿಗೇನಹಳ್ಳಿ ಹೋಬಳಿಯ ಶ್ರಾವಂಡನಹಳ್ಳಿ, ತಿಂಗಳೂರು, ಕಲಿದೇವಪುರ ಮತ್ತು ಯಾಕಾರ್ಲಹಳ್ಳಿ ಗ್ರಾಮದ ರೈತರಿಂದ ₹26 ಲಕ್ಷ ಮೌಲ್ಯದ ಮೆಕ್ಕೆಜೋಳ ಖರೀದಿಸಿದ್ದಾರೆ. ಗೌರಿಬಿದನೂರಿನ ರವಿಶಂಕರ್ ಬಾಬು ಎಂಬಾತನಿಗೆ ಮಾರಿದ್ದಾರೆ. ಈಗ ರೈತರು ಲಿಂಗೇಗೌಡ ಅವರ ಬಳಿ ಹಣ ಕೇಳಿದರೆ ನಾನು ರವಿಶಂಕರ್ ಬಾಬು ಅವರಿಗೆ ಮಾರಿದ ಹಣ ಕೊಟ್ಟಿಲ್ಲ ಹಾಗಾಗಿ ಹಣ ಕೊಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಿದ್ದಾರೆ ಎಂದರು.
ರೈತರು ಇವರ ವಿರುದ್ಧ ಮಧುಗಿರಿ ಡಿವೈಎಸ್ಪಿ. ಕಚೇರಿ ಜೊತೆಗೆ ಕೊಡಿಗೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ನ್ಯಾಯ ದೊರಕಿಲ್ಲ. ಸಂಬಂಧಪಟ್ಟವರು ಕೂಡಲೆ ಇಬ್ಬರು ವರ್ತಕರನ್ನು ಕರೆಸಿ ಹಣ ಕೊಡಿಸಬೇಕು ಎಂದರು.
ರೈತ ಮುಖಂಡ ಶ್ರಾವಂಡನಹಳ್ಳಿ ಗ್ರಾಮದ ಎಸ್.ಪ್ರಕಾಶ್ ಮಾತನಾಡಿ, ‘60 ಕ್ವಿಂಟಲ್ ಮೆಕ್ಕೆಜೋಳವನ್ನು ಜಾಲಹಳ್ಳಿ ಗ್ರಾಮದ ವರ್ತಕ ಲಿಂಗೇಗೌಡರಿಗೆ ಮಾರಿದ್ದೇನೆ. 9 ತಿಂಗಳಿನಿಂದ ಹಣ ಕೊಡದೆ ಕಾಡಿಸುತ್ತಿದ್ದಾರೆ. ಸಮಸ್ಯೆಗಳಿಂದ ಬೇಸತ್ತು ಆತ್ಮಹತ್ಯೆಯೊಂದೇ ದಾರಿ ಎಂಬಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು ರೈತರ ಸಮಸ್ಯೆ ಬಗೆಹರಿಸಿ ಎಂದರು.
ರೈತ ಭೀಮರಾಜು ಮಾತನಾಡಿ, ‘ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ ಎಂದು ಮೆಕ್ಕೆಜೋಳ ಮಾರಿದ್ದೇನೆ. ಆದರೆ ಅವರು ನಮಗೆ ಹಣ ನೀಡದೆ ಕಣ್ಣೀರು ತರಿಸುತ್ತಿದ್ದಾರೆ’ ಎಂದು ಅಳಲು ತೋಡಿಕೊಂಡರು.
ತಿಮ್ಮಪ್ಪ ಹಂಪಸಂದ್ರ, ಗೋವಿಂದಪ್ಪ, ಸದಣ್ಣ, ಲೋಕೇಶ್, ಸುರೇಶ್ ಗೌಡ, ಬಿಸಿಲಹಳ್ಳಿ ಮಂಜಣ್ಣ, ಮಂಜುನಾಥ್, ಅಣ್ಣಯ್ಯಸ್ವಾಮಿ, ತಿಂಗಳೂರು ಲೋಕೇಶ್, ಮಂಜುನಾಥ, ಅಶ್ವತ್ಥಪ್ಪ, ರಾಧಮ್ಮ, ಮುರಳಿಧರ, ಅಶ್ವತ್ಥನಾರಾಯಣ, ರಂಗಯ್ಯ, ಅಶ್ವತ್ಥ್, ಜಾಲಹಳ್ಳಿ ಜಯಣ್ಣ, ಪ್ರಮೀಳಮ್ಮ, ತಿಮ್ಮಕ್ಕ, ರಾಮಯ್ಯ, ವೇದಲವೇಣಿ ರಾಮಚಂದ್ರರೆಡ್ಡಿ, ಮಲ್ಲಸಂದ್ರ ಶಿವಶಂಕರ್ ರೆಡ್ಡಿ, ರಮೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.