ADVERTISEMENT

ಕೈಕೊಟ್ಟ ಭರಣಿ: ಹೆಸರು ಬಿತ್ತನೆಗೆ ರೈತರ ಹಿಂದೇಟು

ಕೃಪೆ ತೋರಿದ ಕೃತ್ತಿಕಾ ಮಳೆ

​ಪ್ರಜಾವಾಣಿ ವಾರ್ತೆ
Published 14 ಮೇ 2021, 7:57 IST
Last Updated 14 ಮೇ 2021, 7:57 IST

ಹುಳಿಯಾರು: ಹೋಬಳಿ ವ್ಯಾಪ್ತಿಯಲ್ಲಿ ಪೂರ್ವ ಮುಂಗಾರಿನ ಹೆಸರು ಬಿತ್ತನೆಗೆ ವರದಾನವಾಗಿದ್ದ ಭರಣಿ ಮಳೆ ಕೈಕೊಟ್ಟಿತ್ತು. ಕೃತ್ತಿಕಾ ಮಳೆ ಬುಧವಾರ ತಡರಾತ್ರಿವರೆಗೆ ಸುರಿದಿದೆ. ಆದರೂ ಹೆಸರು ಬಿತ್ತನೆಗೆ ಕೃತ್ತಿಕಾ ಮಳೆ ಸಕಾಲವಲ್ಲ ಎನ್ನುವುದು ರೈತರ ಅಳಲು.

ಯುಗಾದಿ ಹಬ್ಬದಂದೇ ಪ್ರಾರಂಭವಾದ ಹೊಸ ಮಳೆ ಅಶ್ವಿನಿ ಆರಂಭದಲ್ಲಿ ರೈತರಿಗೆ ಆಸೆ ತೋರಿಸಿ ನಂತರ ಕೈ ಕೊಟ್ಟಿದೆ. ನಾಲ್ಕೈದು ವರ್ಷಗಳ ಪರಿಸ್ಥಿತಿಯೇ ಪುನರಾವರ್ತನೆಯಾಗಿದೆ. ಅಶ್ವಿನಿ ಮಳೆ ಕೈಕೊಟ್ಟಿತು ಇನ್ನೂ ಹೆಸರು ಬಿತ್ತನೆಗೆ ಪೂರಕ ಮಳೆಯಾದ ಭರಣಿ ಈ ಬಾರಿ ಭೂಮಿ ತಣಿಸದೆ ಹೋಗಿದೆ. ಮೇ 11ಕ್ಕೆ ಭರಣಿ ಮಳೆ ಅವಧಿ ಮುಗಿದು ಕೃತ್ತಿಕಾ ಮಳೆ ಆರಂಭವಾಗಿದ್ದು, ಹೆಸರು ಬಿತ್ತನೆಗೆ ಹಿನ್ನಡೆ ಆಗಿರುವುದು ರೈತರ ಅತಂಕಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಭರಣಿ ಮಳೆಯ ಬೆದೆ ಹೆಸರು ಬಿತ್ತನೆಗೆ ಉತ್ತಮವಾಗಿದ್ದು ಹೋಬಳಿ ವ್ಯಾಪ್ತಿಯ ನಂದಿಹಳ್ಳಿ, ಸೀಗೆಬಾಗಿ ಸೇರಿದಂತೆ ಕೆಲವೆಡೆ ಈ ಹಿಂದೆ ಸೋನೆ ಮಳೆಗೆ ಹೆಸರು ಬಿತ್ತನೆ ಮಾಡಿದ್ದಾರೆ. ಪ್ರಸ್ತುತ ಬುಧವಾರ ಬೆಳಿಗ್ಗೆ ಹಾಗೂ ತಡರಾತ್ರಿ ಕೆಲಕಡೆ ಉತ್ತಮ ಹದ ಮಳೆಗೆ ಬೀಜ ಮೊಳಕೆಯೊಡೆದಿವೆ. ಇನ್ನೂ ಈಗ ಹೆಸರು ಬಿತ್ತನೆ ಮಾಡಲು ಬೆದೆ ಮುಗಿದಿದೆ ಎಂದು ಬಿತ್ತನೆಗೆ ಹಿಂದೇಟು ಹಾಕುತ್ತಿದ್ದಾರೆ.

ಭರಣಿ ಮಳೆ ಕಾಲ ಮುಗಿದಿದ್ದು, ಹೆಸರು ಬಿತ್ತನೆ ಬೆದೆ ಮುಗಿದಿದೆ. ಆದರೆ ಮುಂದಿನ ರೋಹಿಣಿ ಮಳೆ ಆರಂಭದಲ್ಲಿ ಬಂದರೆ ಭರಣಿ ಮಳೆ ಕಾಲ ಮುಗಿದಿದ್ದು ವಿಧಿಯಿಲ್ಲದೆ ಹೆಸರು ಬಿತ್ತನೆ ಮಾಡುತ್ತಿದ್ದೇವೆ. ಆದರೆ ನಂತರದ ಮಳೆಗೆ ಬೀಜ ಬಿತ್ತಿದರೆ ಭರಣಿ ಮಳೆಯ ಬೆದೆಯಷ್ಟು ಅನುಕೂಲವಲ್ಲ. ಹೆಚ್ಚು ಬೀಜ ಬಿತ್ತುವ ಬದಲು ಸ್ವಲ್ಪ ಬಿತ್ತನೆ ಮಾಡಿ ಮುಂದಿನ ವರ್ಷಕ್ಕೆ ಬೀಜ ಮಾಡಿಕೊಳ್ಳಬಹುದು ಎಂಬ ಭರವಸೆಯಿದೆ ಎನ್ನುತ್ತಾರೆ ಮೇಲನಹಳ್ಳಿ ರೈತ ಎಂ.ಎನ್.ಮೇಲಪ್ಪ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.