ಪಾವಗಡ: ಪಟ್ಟಣದ ಸರ್ವೆ ಇಲಾಖೆಯಲ್ಲಿ ನಡೆಯುತ್ತಿರುವ ಅವ್ಯವಹಾರ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಅವ್ಯವಹಾರದಲ್ಲಿ ತೊಡಗಿರುವವರ ವಿರುದ್ಧ ಕೂಡಲೇ ಕ್ರಮ ಜರುಗಿಸಿ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿ ರಾಷ್ಟ್ರೀಯ ಕಿಸಾನ್ ಸಂಘದ ನೇತೃತ್ವದಲ್ಲಿ ರೈತರು ಶನಿವಾರ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
‘ಪಟ್ಟಣದ ಸರ್ವೆ ಕಚೇರಿಯಲ್ಲಿ ಅವ್ಯವಹಾರ, ಭ್ರಷ್ಟಾಚಾರ ಹೆಚ್ಚಿದೆ. ಸರ್ಕಾರಕ್ಕೆ ಸೋಲಾರ್ ಕಂಪನಿಯಿಂದ ಯಾವುದೇ ಶುಲ್ಕ ಪಾವತಿಸದಿದ್ದರೂ ರಜಾದಿನಗಳಲ್ಲಿ ಸೋಲಾರ್ ಕಂಪನಿಗೆ ನೀಡಿರುವ ಜಮೀನುಗಳ ಅಳತೆ ಮಾಡಿಕೊಟ್ಟು ಇಲಾಖೆಯ ಕೆಲವರು ಸರ್ಕಾರಕ್ಕೆ ನಷ್ಟ ಉಂಟುಮಾಡಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ’ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.
ಕಚೇರಿಯ ದಾಖಲೆಗಳನ್ನು ಮಾರಿಕೊಳ್ಳಲಾಗುತ್ತಿದೆ. ರೈತರನ್ನು ದಾಖಲೆ ನೀಡದೆ ವರ್ಷಗಟ್ಟಲೆ ಅಲೆದಾಡಿಸುವ ಅಧಿಕಾರಿಗಳು ಲಂಚ ಕೊಟ್ಟರೇ ಕೆಲವೇ ನಿಮಿಷಗಳಲ್ಲಿ ಕೆಲಸ ಮಾಡಿಕೊಡುತ್ತಾರೆ. ಸರ್ಕಾರಿ ಸರ್ವೆ ಕಚೇರಿಯನ್ನು ಇವರ ಸ್ವಂತ ವಾಣಿಜ್ಯ ವ್ಯಾಪಾರ ಮಳಿಗೆಯನ್ನಾಗಿ ಪರಿವರ್ತಿಸಿಕೊಂಡಿದ್ದಾರೆ ಎಂದು ದೂರಿದರು.
ರೈತರ ದಾಖಲೆಗಳಿಗಾಗಿ ₹1ರಿಂದ ₹2 ಸಾವಿರ ಕೊಡಬೇಕು. ಹಣ ಕೊಡದಿದ್ದರೆ ತಿಂಗಳುಗಳು ಕಳೆದರೂ ನೀಡುವುದಿಲ್ಲ. ಕೆಲ ಸಿಬ್ಬಂದಿ ತಮಗೆ ಇಷ್ಟ ಬಂದ ಸಮಯಕ್ಕೆ ಕಚೇರಿಗೆ ಬರುತ್ತಾರೆ, ಹೋಗುತ್ತಾರೆ ಎಂದು ಆರೋಪಿಸಿದರು.
ಕೂಡಲೇ ತನಿಖೆ ನಡೆಸಿ ಖಾಸಗಿಯಾಗಿ ಅಳತೆ ನಡೆಸಿರುವ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ ಇಲ್ಲಿಂದ ಬೇರೆಡೆಗೆ ವರ್ಗಾವಣೆ ಮಾಡಬೇಕು. ಭ್ರಷ್ಟಾಚಾರದಲ್ಲಿ ತೊಡಗಿರುವವರ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ನಿಗಾವಹಿಸಿ ಕ್ರಮ ತೆಗೆದುಕೊಳ್ಳಬೇಕು. ಸಕಾಲಕ್ಕೆ ಕಚೇರಿಗೆ ಬರದೆ ಕರ್ತವ್ಯ ಲೋಪ ಎಸಗುವವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
ಬೇಡಿಕೆ ಈಡೇರಿಸದಿದ್ದರೆ ತಹಶೀಲ್ದಾರ್ ಕಚೇರಿ ಮುಂಭಾಗ ಶಾಮಿಯಾನ ಹಾಕಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ತಾಲ್ಲೂಕು ಘಟಕದ ಅಧ್ಯಕ್ಷ ವಿ. ಕೃಷ್ಣರಾವ್, ಅನಸೂಯಮ್ಮ, ಲಿಂಗಪ್ಪ, ಅನಿತಮ್ಮ, ಸುನಿತಮ್ಮ, ತಿಪ್ಪೇಸ್ವಾಮಿ, ಹನುಮಂತರಾಯ, ಲಕ್ಷ್ಮಿದೇವಿ, ಪದ್ಮಜ, ಅನಿತಮ್ಮ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.