ಕುಣಿಗಲ್: ರಾಗಿ ಖರೀದಿ ಕೇಂದ್ರದ ಗ್ರೇಡರ್ ಮಾಹಿತಿ ನೀಡದೆ ಗೈರಾಗಿದ್ದು, ಅಸಮಾಧಾನಗೊಂಡ ರೈತರು ಎಪಿಎಂಸಿ ಆವರಣದ ಮುಂದಿನ ಹಳೇ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕುಳಿತು ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ಮಧ್ಯಾಹ್ನ ನಡೆಯಿತು.
ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿದ ಭಾರತೀಯ ಕಿಸಾನ್ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬೀಚನಹಳ್ಳಿ ಶ್ರೀನಿವಾಸ್, ತಾಲ್ಲೂಕಿನಲ್ಲಿ ಕಳೆದೆರಡು ದಿನಗಳಿಂದ ಮಳೆಯಾಗುತ್ತಿದೆ. ಮಳೆಯಲ್ಲೂ ನೂರಾರು ರೈತರು ತಾವು ಬೆಳೆದ ಸಾವಿರಾರು ಕ್ವಿಂಟಲ್ ರಾಗಿಯನ್ನು ಖರೀದಿ ಕೇಂದ್ರಕ್ಕೆ ತಂದಿದ್ದಾರೆ. ಆದರೆ ರಾಗಿಯ ಗುಣಮಟ್ಟ ನಿರ್ಧರಿಸಬೇಕಾಗಿದ್ದ ಕೃಷಿ ಇಲಾಖೆಯ ಗ್ರೇಡರ್ ಯೋಗೀಶ್ ಶುಕ್ರವಾರ ಗೈರಾಗಿದ್ದರು. 12 ಗಂಟೆವರೆಗೂ ಕಾದು ಸುಸ್ತಾದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಸೌಮ್ಯಶ್ರೀ ಅವರನ್ನು ಸಂಪರ್ಕಿಸಿದಾಗ ಮೊಬೈಲ್ ಸಂಪರ್ಕಕ್ಕೆ ಸಿಗದೆ ಜಂಟಿ ನಿರ್ದೇಶಕರಿಗೆ ಸಂಪರ್ಕಿಸಿದಾಗ ಸ್ಪಂದಿಸದ ಕಾರಣ ಬೇಸತ್ತು ಪ್ರತಿಭಟನೆ ಮಾಡಬೇಕಾಗಿ ಬಂದಿದೆ. ಈ ನಡುವೆ ತಹಶೀಲ್ದಾರ್ ಮತ್ತು ಶಾಸಕರ ಗಮನಕ್ಕೂ ತಂದಿದ್ದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ರೈತರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ ಕಾರಣ ಬೆಂಗಳೂರು ಮತ್ತು ಹಾಸನದ ಕಡೆ ಸಂಚರಿಸುವ ವಾಹನಗಳಿಗೆ ತೊಂದರೆಯಾಗಿ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಸಿಪಿಐ ರಾಜು ಸಿಬ್ಬಂದಿಯೊಂದಿಗೆ ಬಂದು ಪ್ರತಿಭಟನಕಾರರ ಮನ ಒಲಿಸಿ ಸುಗಮ ಸಂಚಾರಕ್ಕೆ ಅನವುಮಾಡಿಕೊಟ್ಟರು.
ಸ್ಥಳಕ್ಕೆ ಬಂದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಸೌಮ್ಯಶ್ರೀ, ರೈತರೊಂದಿಗೆ ಚರ್ಚಿಸಿ, ಗ್ರೇಡರ್ ಯೋಗೀಶ್ ಗೈರಾಗಿರುವ ಮಾಹಿತಿ ಇಲ್ಲದ ಕಾರಣ ಸಮಸ್ಯೆಯಾಗಿದೆ. ಕೂಡಲೆ ಇಬ್ಬರು ಗ್ರೇಡರ್‌ಗಳನ್ನು ನಿಯೋಜಿಸಿ ರಾಗಿ ಖರೀದಿಯ ಪ್ರಕ್ರಿಯೆ ಪ್ರಾರಂಭಿಸುವುದಾಗಿ ತಿಳಿಸಿದರು.
ಆಹಾರ ಇಲಾಖೆಯ ಶಿರಸ್ತೇದಾರ ಮಲ್ಲಿಕಾರ್ಜುನಯ್ಯ ಮಾತನಾಡಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ರಾಗಿ ಖರೀದಿಗೆ ಮತ್ತು ಸಾಗಾಣೆ ಮಾಡಲು ಸಿದ್ಧವಿದೆ. ಕೃಷಿ ಇಲಾಖೆಯ ಅಧಿಕಾರಿಗಳು ಸ್ಪಂದಿಸದ ಕಾರಣ ಸಮಸ್ಯೆಯಾಗುತ್ತಿದೆ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.