ಗುಬ್ಬಿ: ತಾಲ್ಲೂಕಿನ ವಿವಿಧೆಡೆ ರೈತರ ಅಡಿಕೆ ಸಸಿಗಳನ್ನು ದುಷ್ಕರ್ಮಿಗಳು ಕಡಿಯುತ್ತಿದ್ದರೂ ಪೊಲೀಸರು ಮತ್ತು ತಾಲ್ಲೂಕು ಆಡಳಿತ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ರೈತರು ಬುಧವಾರ ರೈತ ಸಂಘದಿಂದ ತಾಲ್ಲೂಕು ಆಡಳಿತ ಸೌಧಕ್ಕೆ ಮುತ್ತಿಗೆ ಹಾಕಿ ತಹಶೀಲ್ದಾರ್ ಆರತಿ ಬಿ. ಅವರಿಗೆ ಮನವಿ ಪತ್ರ ಸಲ್ಲಿಸಿದರು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ. ಗೋವಿಂದರಾಜು ಮಾತನಾಡಿ, ಅಡಿಕೆ ಸಸಿಗಳನ್ನು ಕಡಿಯುವ ಮನಸ್ಥಿತಿಯವನು ನಾಳೆ ರೈತರ ತಲೆಗಳನ್ನು ಕಡಿಯಲು ಹಿಂಜರಿಯುವುದಿಲ್ಲ. ತಪ್ಪು ಯಾರೇ ಮಾಡಿದ್ದರೂ ಶಿಕ್ಷೆ ಆಗಲೇಬೇಕು. ಪೊಲೀಸ್ ಇಲಾಖೆ, ತಾಲ್ಲೂಕು ಆಡಳಿತ ಅಗತ್ಯ ಕ್ರಮ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಗುಬ್ಬಿ- ಸಿ.ಎಸ್. ಪುರ ರಾಜ್ಯ ಹೆದ್ದಾರಿಯಲ್ಲಿ ಜಿ. ಹೊಸಹಳ್ಳಿಯ ಬಳಿ ನಿರ್ಮಿಸಲು ಮುಂದಾಗಿರುವ ಟೋಲ್ ಪ್ಲಾಜಾವನ್ನು ತಕ್ಷಣ ನಿಲ್ಲಿಸಬೇಕು. ಆ ಹೆದ್ದಾರಿಯಲ್ಲಿ ಯಾವುದೇ ಭಾರಿ ವಾಹನಗಳು ಓಡಾಡದಿರುವುದರಿಂದ ಸ್ಥಳೀಯರಿಂದಲೇ ಹಣ ಸಂಗ್ರಹಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಕಿಡಿಕಾರಿದರು.
ಟೋಲ್ ಸಂಗ್ರಹ ಕೇಂದ್ರ ಸ್ಥಾಪಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ತಾಲ್ಲೂಕು ಆಡಳಿತ ಹಾಗೂ ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಿಕೊಡಲಾಗಿದೆ. ಒಂದು ವೇಳೆ ಕಾಮಗಾರಿ ಮುಂದುವರಿಸಿದಲ್ಲಿ ಪ್ರತಿಭಟನೆ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೇಗೌಡ ಮಾತನಾಡಿ, ದೇಶಕ್ಕೆ ಅನ್ನ ಕೊಡುವ ರೈತರ ಜೀವಕ್ಕೆ ಭದ್ರತೆ ಇಲ್ಲವಾಗಿದೆ. ಅನೇಕ ಸಂಕಷ್ಟಗಳಿಗೆ ಗುರಿಯಾಗುವ ರೈತರ ಬೆಂಬಲಕ್ಕೆ ನಿಲ್ಲಬೇಕಿರುವ ಅಧಿಕಾರಿಗಳು ರೈತರನ್ನು ಕಡೆಗಣಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ತಾಲ್ಲೂಕು ಘಟಕದ ಕಾರ್ಯದರ್ಶಿ ಲೋಕೇಶ್, ಯುವ ಘಟಕದ ಅಧ್ಯಕ್ಷ ಶಿವಕುಮಾರ್, ಪದಾಧಿಕಾರಿಗಳು ಹಾಗೂ ರೈತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.