ADVERTISEMENT

ಬಗರ್‌ಹುಕುಂ: ಬೆಳ್ಳಾವಿಯ 1,500 ಅರ್ಜಿ ವಜಾ

ಸಾಗುವಳಿ ಚೀಟಿ ವಿಳಂಬ: ಶಾಸಕ ಕಿಡಿ, ‘ರೈತರಿಗೆ ಅನ್ಯಾಯವಾಗಲು ಬಿಡಲ್ಲ’

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2025, 16:16 IST
Last Updated 5 ಫೆಬ್ರುವರಿ 2025, 16:16 IST
ಬಿ.ಸುರೇಶ್‌ಗೌಡ
ಬಿ.ಸುರೇಶ್‌ಗೌಡ   

ತುಮಕೂರು: ಬೆಳ್ಳಾವಿ ವ್ಯಾಪ್ತಿಯ ರೈತರು ಸಲ್ಲಿಸಿದ್ದ 1,500ಕ್ಕೂ ಹೆಚ್ಚು ಬಗರ್‌ಹುಕುಂ ಅರ್ಜಿ ತಿರಸ್ಕೃತಗೊಂಡಿದ್ದು, ಅರ್ಜಿ ವಜಾಗೊಳಿಸಿದ ಕಂದಾಯ ನಿರೀಕ್ಷಕರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಶಾಸಕ ಬಿ.ಸುರೇಶ್‌ಗೌಡ ಹೇಳಿದರು.

ನಗರದ ತಹಶೀಲ್ದಾರ್‌ ಕಚೇರಿಯಲ್ಲಿ ಬುಧವಾರ ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸಭೆ ನಡೆಸಿ ಮಾತನಾಡಿದರು.

ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 1994ರಿಂದ 2022ರ ವರೆಗೆ ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಗೆ 6,079 ಅರ್ಜಿ ಸಲ್ಲಿಕೆಯಾಗಿವೆ. ಈ ಪೈಕಿ 1,230 ಅರ್ಜಿ ಸಕ್ರಮವಾಗಿದ್ದರೂ ಸಾಗುವಳಿ ಚೀಟಿ ನೀಡದೆ ವಿಳಂಬ ಮಾಡಲಾಗಿದೆ. 8 ದಶಕಗಳಿಂದ ಉಳುಮೆ ಮಾಡುತ್ತಿರುವ ರೈತರು ಸಾಗುವಳಿ ಚೀಟಿಗಾಗಿ ಕಚೇರಿಗೆ ಅಲೆಯುತ್ತಿದ್ದಾರೆ. ಸಾವಿರಾರು ರೈತರು ಸೌಲಭ್ಯದಿಂದ ವಂಚಿತರಾಗಲು ಕಂದಾಯ ನಿರೀಕ್ಷಕರೇ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಗೋಮಾಳದಲ್ಲಿ ಕೃಷಿ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ನೀಡಲು ಅವಕಾಶ ಇಲ್ಲ’ ಎಂದು ತಹಶೀಲ್ದಾರ್‌ ರಾಜೇಶ್ವರಿ ಪ್ರತಿಕ್ರಿಯಿಸಿದರು. ಇದರಿಂದ ಸಿಟ್ಟಿಗೆದ್ದ ಶಾಸಕರು, ‘ಯಾವುದೇ ಅಧಿಸೂಚನೆ ಇಲ್ಲದೆ ಕೆಐಎಡಿಬಿಗೆ ಗೋಮಾಳ ನೀಡಲು ನಿಮ್ಮ ತಕರಾರಿಲ್ಲ. ರೈತರಿಗೆ ಜಮೀನು ನೀಡಲು ಮಾತ್ರ ನೂರೆಂಟು ಕಾನೂನು ಅಡ್ಡಿ ಬರುತ್ತವೆ. ಸಮಿತಿಗೆ ಅರ್ಜಿ ಸಲ್ಲಿಸಿರುವ ಯಾವುದೇ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ’ ಎಂದರು.

ತಿರಸ್ಕೃತಗೊಂಡ ಅರ್ಜಿ ಮರು ಪರಿಶೀಲಿಸಬೇಕು. ಅರ್ಹರಿಗೆ ಸಾಗುವಳಿ ಚೀಟಿ ನೀಡುವ ಪ್ರಕ್ರಿಯೆಯನ್ನು ಒಂದು ತಿಂಗಳಲ್ಲಿ ಪೂರ್ಣಗೊಳಿಸಬೇಕು. ಈಗಾಗಲೇ ವಿತರಣೆ ಮಾಡಿದ ಚೀಟಿಗಳಿಗೆ ಕೂಡಲೇ ದುರಸ್ತು (ಪೋಡಿ) ಮಾಡಿ ಹೊಸ ಸಂಖ್ಯೆ ನೀಡಲು ಕ್ರಮ ವಹಿಸಬೇಕು. 30 ವರ್ಷಗಳಿಂದ ಸಾಗುವಳಿ ಮಾಡುತ್ತಿರುವವರಿಗೆ ಅನ್ಯಾಯವಾಗದಂತೆ‌ ನೋಡಿಕೊಳ್ಳಬೇಕು ಎಂದು ನಿರ್ದೇಶಿಸಿದರು.

ಸಮಿತಿಯ ನಾಮನಿರ್ದೇಶಿತ ಸದಸ್ಯರಾದ ಕರೆರಂಗಯ್ಯ, ಶಿವರಾಜ್, ರೂಪಾ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.