ADVERTISEMENT

ಸಾಲು, ಸಾಲು ಹಬ್ಬ: ಹೂ ದುಬಾರಿ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2021, 3:07 IST
Last Updated 19 ಆಗಸ್ಟ್ 2021, 3:07 IST
ತುಮಕೂರಿನ ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಹೂವು ಖರೀದಿಸಿದ ಜನರು
ತುಮಕೂರಿನ ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಹೂವು ಖರೀದಿಸಿದ ಜನರು   

ತುಮಕೂರು: ವರಮಹಾಲಕ್ಷ್ಮಿ ಹಬ್ಬದ ಆಚರಣೆಗೆ ಮಹಿಳೆಯರು ಸಿದ್ಧತೆ ನಡೆಸಿದ್ದು ಹಬ್ಬಕ್ಕೆ ಇನ್ನು ಒಂದು ದಿನವಷ್ಟೇ ಬಾಕಿ ಉಳಿದಿದ್ದು, ಹೂವು ದುಬಾರಿಯಾಗಿದೆ.

ಕೋವಿಡ್ ಸಮಯದಲ್ಲಿ ಹಾಗೂ ಕೋವಿಡ್ ನಂತರವೂ ಹೂವು ಕೇಳುವವರೇ ಇರಲಿಲ್ಲ. ಶುಭ ಕಾರ್ಯಗಳೂ ಅಷ್ಟಾಗಿ ನಡೆಯುತ್ತಿರಲಿಲ್ಲ. ದೇವಸ್ಥಾನಗಳಲ್ಲಿ ದರ್ಶನಕಷ್ಟೇ ಅವಕಾಶ ನೀಡಿದ್ದು, ಪೂಜೆ, ಇತರ ಕಾರ್ಯಗಳಿಗೆ ಅವಕಾಶ ಇಲ್ಲವಾಗಿದ್ದು, ಹೂವಿನ ಬೆಲೆ ತೀವ್ರವಾಗಿ ಕುಸಿದಿತ್ತು. ಆದರೆ ಹಬ್ಬ ಬರುತ್ತಿದ್ದಂತೆ ಬೆಲೆ ದಿಢೀರ್ ಹೆಚ್ಚಳವಾಗಿದ್ದು ಸೇವಂತಿ ಹೂವು ಮಾರು ₹150ರ ವರೆಗೂ ಏರಿಕೆಯಾಗಿದೆ. ಬೆಂಗಳೂರು ಮಾರುಕಟ್ಟೆಗಿಂತಲೂ ತುಮಕೂರಿನ ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಹೂವು ದುಬಾರಿಯಾಗಿದೆ.

ಮಲ್ಲಿಗೆ ಹೂ ಕೆ.ಜಿ ₹1,300ರಿಂದ ₹1,400, ಕಾಕಡ ಕೆ.ಜಿ ₹1,400ರಿಂದ ₹1500ರ ವರೆಗೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದ್ದು ಕಂಡುಬಂತು. ಗುರುವಾರ ಮತ್ತೂ ಏರಿಕೆಯಾಗಲಿದೆ ಎಂಬುದು ವ್ಯಾಪಾರಿಗಳ ವಿವರಣೆ. ಈವರೆಗೆ ಹೂವು ಕೊಳ್ಳುವವರೇ ಇರಲಿಲ್ಲ. ಹಬ್ಬ ಬಂತು ಎಂದು ಒಮ್ಮೆಲೆ ಬೆಲೆ ಹೆಚ್ಚಳ ಮಾಡಿದ್ದಾರೆ. ರೈತರ ಬಳಿ ಕಡಿಮೆ ಬೆಲೆಗೆ ಖರೀದಿಸಿ ನಮಗೆ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ಹೂವು ಖರೀದಿಗೆ ಬಂದಿದ್ದ ಪ್ರಮಿಳಾ ಗೊಣಗುತ್ತಲೇ ಖರೀದಿಯತ್ತ ಮುಖಮಾಡಿದರು.

ADVERTISEMENT

ದುಬಾರಿಯಾಗದ ಹಣ್ಣು: ಹಣ್ಣುಗಳ ಬೆಲೆಯಲ್ಲಿ ಹೆಚ್ಚಿನ ಏರಿಕೆ ಕಂಡು ಬಂದಿಲ್ಲ. ಕಾಶ್ಮೀರದಿಂದ ಸೇಬು ಬರುತ್ತಿದ್ದು, ಬೆಲೆ ಇಳಿಕೆಯಾಗಿದ್ದು, ಕೆ.ಜಿ ₹100ರಿಂದ ₹150ರ ವರೆಗೂ ಮಾರಾಟವಾಗುತ್ತಿದೆ. ಏಲಕ್ಕಿ ಬಾಳೆ ಕೆ.ಜಿ ₹40–₹50, ಪಚ್ಚಬಾಳೆ ಕೆ.ಜಿ ₹25, ಮರ ಸೇಬು ಕೆ.ಜಿ ₹80– ₹100ಕ್ಕೆ ಮಾರಾಟವಾಯಿತು. ಕಳೆದ ಆರು ತಿಂಗಳಿಂದ ದುಬಾರಿಯಾಗಿದ್ದ ಮೂಸಂಬಿ ಬೆಲೆ ಕಡಿಮೆಯಾಗಿದ್ದು, ಕೆ.ಜಿ ₹50–60ಕ್ಕೆ ಇಳಿಕೆ ಕಂಡಿದೆ.

ಕೋವಿಡ್‌ ಆತಂಕದಿಂದ ಹೆಚ್ಚಿನ ಸಂಖ್ಯೆಯ ಜನರು ಮನೆಯಿಂದ ಹೊರಗೆ ಬರುತ್ತಿರಲಿಲ್ಲ. ಖರೀದಿ ಮಾಡಲು ಮಾರುಕಟ್ಟೆಯಲ್ಲಿ ಜನಸಂದಣಿ ಕಾಣಿಸುತ್ತಿರಲಿಲ್ಲ. ಈಗ ಹಬ್ಬಕ್ಕೆ ಹೂವು, ಹಣ್ಣು, ಇತರೆ ಅಗತ್ಯ ಸಾಮಾನುಗಳನ್ನು ಖರೀದಿಸಲು ಜನರು ಮುಗಿಬಿದ್ದರು. ಇದರಿಂದಾಗಿ ನಗರದ ಎಲ್ಲೆಡೆ ಜನಜಂಗುಳಿ ಕಂಡುಬಂತು. ಅಂತರಸನಹಳ್ಳಿ ಮಾರುಕಟ್ಟೆ ಪ್ರದೇಶವಷ್ಟೇ ಅಲ್ಲದೆ ಮಂಡಿಪೇಟೆ, ಚಿಕ್ಕಪೇಟೆ, ಬಾಳನಕಟ್ಟೆ ಪ್ರದೇಶ, ಸೋಮೇಶ್ವರಪುರಂ ಸೇರಿದಂತೆ ಇತರೆಡೆ ಜನರು ಖರೀದಿಯಲ್ಲಿ ತೊಡಗಿದ್ದರು.

ಲಕ್ಷ್ಮಿ ದೇವಿಯನ್ನು ಪೂಜಿಸಲು ಮಹಿಳೆಯರು ಸಿದ್ಧತೆ ನಡೆಸಿದ್ದು, ಹಸಿರು ಬಳೆ, ಅಲಂಕಾರಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳುತ್ತಿದ್ದ ದೃಶ್ಯ ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.