ಹುಳಿಯಾರು: ಜುಲೈ ಮಧ್ಯಭಾಗ ಪೂರ್ಣ ಮಳೆಗಾಲದ ದಿನಗಳಾಗಿದ್ದು, ಹೊಲದಲ್ಲಿ ಬೆಳೆ ಮಧ್ಯೆ ಬೆಳದ ಕಳೆ ಹಾಗೂ ಬದುಗಳಲ್ಲಿ ಹುಲುಸಾಗಿ ಆಹಾರ ತಿನ್ನುತ್ತಿದ್ದ ರಾಸುಗಳು ಈ ವರ್ಷ ಮಳೆ ಕೊರತೆಯಿಂದ ಕೆರೆ, ಕಟ್ಟೆಗಳ ಕೂಳೆ ಹುಲ್ಲು ಹಾಗೂ ಮರಗಳ ಸೊಪ್ಪನ್ನು ತಿನ್ನುವಂತಾಗಿದೆ.
ಮುಂಗಾರು ಆರಂಭದ ನಂತರ ಎರಡು ತಿಂಗಳಿನಿಂದಲೂ ನಿರೀಕ್ಷಿತ ಮಳೆಯಾಗದೆ ಸಂಪೂರ್ಣ ಭರ ಆವರಿಸಿದೆ. ಕಳೆದ ವರ್ಷ ಕೂಡ ಉತ್ತಮ ಮಳೆಯಾಗದೆ ರಾಗಿ, ನವಣೆ ಸೇರಿದಂತೆ ಬೆಳೆಗಳು ಉತ್ತಮವಾಗಿ ಬೆಳೆಯದ ಕಾರಣ ಮೇವು ಬರಲಿಲ್ಲ. ಕಾಳು ಬೇರ್ಪಡಿಸಿ ಹುಲ್ಲನ್ನು ಒಣಗಿಸಿ ಬಣವೆ ಹಾಕಿಕೊಂಡು ದಾಸ್ತಾನು ಮಾಡಿಕೊಂಡು ಬಳಸುತ್ತಿದ್ದರು. ಕಳೆದ ವರ್ಷ ಮಳೆ ಬಾರದ ಕಾರಣ ಹುಲ್ಲು ದಾಸ್ತಾನು ಮಾಡಲು ಆಗಿಲ್ಲ. ಕೆಲ ರೈತರಿಗೆ ಅಲ್ಪಸ್ವಲ್ಪ ಆಗಿದ್ದರೂ ಈಗಾಗಲೇ ದಾಸ್ತಾನು ಮುಗಿದು ಹೋಗಿದೆ.
ಗುಡ್ಡ ಪ್ರದೇಶಗಳಲ್ಲಿ ಬಾದೆಹುಲ್ಲು ಇದ್ದರೆ ಅದನ್ನಾದರೂ ಮೇಯಿಸಿ ಕೊಳ್ಳುತ್ತಿದ್ದರು. ಆದರೆ ಡಿಸೆಂಬರ್‌ನಲ್ಲಿಯೇ ಗುಡ್ಡಗಳು ಹೊತ್ತಿ ಉರಿಯುವುದರಿಂದ ಅಲ್ಲಿಯೂ ಮೇವು ಸಿಗುತ್ತಿಲ್ಲ. ಮುಂಗಾರಿನಲ್ಲಿ ಉತ್ತಮ ಮಳೆ ಬಂದರೆ ಪೂರ್ವ ಮುಂಗಾರು ಬೆಳೆಗಳ ಜತೆ ಹುಲ್ಲು ಬೆಳೆಯುತ್ತಿತ್ತು. ಅದಲ್ಲದೆ ಮುಂಗಾರು ಬೆಳೆ ಚನ್ನಾಗಿ ಬಂದಿದ್ದರೆ ಹೆಸರು ಸೊಪ್ಪು ಕೂಡ ರಾಸುಗಳ ಮೇವಿಗೆ ಬಳಕೆಯಾಗುತ್ತಿತ್ತು. ರೋಹಿಣಿ ಮಳೆ ಬಂದಿದ್ದರೆ ಜೋಳದ ಬೀಜಗಳ ಬಿತ್ತನೆಯಿಂದ ರಾಸುಗಳ ಮೇವಿಗೆ ತೊಂದರೆ ಆಗುತ್ತಿರಲಿಲ್ಲ. ಆದರೆ ಎರಡು ತಿಂಗಳಿನಿಂದ ಮಳೆಯಿಲ್ಲದೆ ಎಲ್ಲಿಯೂ ಮೇವು ಲಭ್ಯವಾಗದೆ ರೈತರು ಮೇವಿಗಾಗಿ ಪರದಾಡುತ್ತಿದ್ದಾರೆ.
ಕೊಳವೆಬಾವಿ ಹೊಂದಿರುವ ರೈತರು ಮೇವು ಬೆಳೆದುಕೊಳ್ಳಲು ನೀರಿನ ಬರ ಎದುರಾಗಿದೆ. ಕೊಳವೆಬಾವಿಯ ಅಲ್ಪಸ್ವಲ್ಪ ನೀರನ್ನು ದೀರ್ಘಾವಧಿ ಬೆಳೆಗಳಾದ ತೆಂಗು, ಅಡಿಕೆ ಉಳಿಸಿಕೊಳ್ಳಲು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ದುಬಾರಿ ಹಣ ತೆತ್ತು ಬೇರೆ ಕಡೆಯಿಂದ ಮೇವು ತರಲು ರೈತರ ಬಳಿ ಆರ್ಥಿಕ ಸಮಸ್ಯೆ ಕಾಡುತ್ತಿದೆ. ಹೈನುಗಾರಿಕೆಗಾಗಿ ಮಿಶ್ರತಳಿ ಹಸುಗಳನ್ನು ಪಾಲನೆ ಮಾಡಿರುವ ಹೈನುಗಾರರು ಮೇವಿಗೆ ಪರದಾಡುತ್ತಿದ್ದಾರೆ.
ಮಿಶ್ರತಳಿ ಹಸುಗಳು ಹೆಚ್ಚು ಮೇವು ತಿನ್ನುವುದರಿಂದ ಅವುಗಳಿಗೆ ಮೇವು ಹುಡುಕುವುದು ಕಷ್ಟವಾಗಿ ಪರಿಣಮಿಸಿದೆ. ಮನೆಯಲ್ಲಿಯೇ ಇದ್ದು ಹಸಿ ಮೇವು ತಿಂದು ಹಾಲು ಕರೆಯುವ ಹಸುಗಳನ್ನು ವಿಧಿಯಿಲ್ಲದೆ ಕೆರೆ ದಂಡೆ ಸೇರಿದಂತೆ ಇತರೆಡೆ ಮೇವು ಮೇಯಿಸಲು ಹೋಗುವ ಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಹೈನುಗಾರರು. ಈಗಾಗಲೇ ಬಹುತೇಕ ರೈತರು ಮರದ ಸೊಪ್ಪನ್ನು ಆಶ್ರಯಿಸುತ್ತಿದ್ದಾರೆ. ಮುಂದಿನ ವಾರದಲ್ಲಿ ಮಳೆ ಬಾರದೆ ಹೋದರೆ ರೈತರು ರಾಸುಗಳ ಮೇವಿಗೆ ಬೇಸಿಗೆ ಕಾಲದಲ್ಲಿ ಬರ ಅನುಭವಿಸಿದಂತೆ ಮಳೆಗಾಲದಲ್ಲಿಯೂ ಅನುಭವಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ರೈತರು.
ಕಳೆದ ವರ್ಷ ಉತ್ತಮ ಮಳೆಬಾರದೆ ಹುಲ್ಲು ದಾಸ್ತಾನು ಮಾಡಲು ಆಗಿಲ್ಲ. ಪ್ರಸಕ್ತ ಮುಂಗಾರಿನಲ್ಲಿ ಮಳೆ ಕೈಕೊಟ್ಟು ಕಾರಣ ಹೊಲಗಳಲ್ಲಿ ಮೇವು ಸಿಗುತ್ತಿಲ್ಲ. ಮೇವಿನ ಬರದಿಂದ ಮಿಶ್ರ ತಳಿ ಹಸುವೊಂದನ್ನು ಅನಿವಾರ್ಯವಾಗಿ ಮಾರಬೇಕಾಯಿತುಜಯಣ್ಣ ರಂಗನಕೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.