ADVERTISEMENT

ಕತ್ತಲಿಗೆ ಬೆಳಕಾದ ತತ್ವಪದ: ಲೇಖಕ ಎಸ್.ನಟರಾಜ ಬೂದಾಳು

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 3:33 IST
Last Updated 23 ಸೆಪ್ಟೆಂಬರ್ 2021, 3:33 IST
ತುಮಕೂರಿನಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಲೇಖಕ ಎಸ್.ನಟರಾಜ ಬೂದಾಳು ಅವರನ್ನು ಅಭಿನಂದಿಸಲಾಯಿತು. ವಿವಿಧ ಸಂಘಟನೆಗಳ ಪ್ರಮುಖರಾದ ರಾಣಿ ಚಂದ್ರಶೇಖರ್, ಎನ್.ನಾಗಪ್ಪ, ಡಾ.ಯೋಗೀಶ್ವರಪ್ಪ, ಡಾ.ನಂಜುಂಡಪ್ಪ, ಕೆ.ಎಸ್.ಸಿದ್ಧಲಿಂಗಪ್ಪ, ಎಚ್.ಕೆ.ನರಸಿಂಹಮೂರ್ತಿ, ಮರಿಬಸಪ್ಪ, ಟಿ.ಎಸ್.ಆಂಜನಪ್ಪ, ಯೋಗಾನಂದ್, ಪಂಚಾಕ್ಷರಯ್ಯ, ಎಂ.ಎಚ್.ನಾಗರಾಜು ಇದ್ದರು
ತುಮಕೂರಿನಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಲೇಖಕ ಎಸ್.ನಟರಾಜ ಬೂದಾಳು ಅವರನ್ನು ಅಭಿನಂದಿಸಲಾಯಿತು. ವಿವಿಧ ಸಂಘಟನೆಗಳ ಪ್ರಮುಖರಾದ ರಾಣಿ ಚಂದ್ರಶೇಖರ್, ಎನ್.ನಾಗಪ್ಪ, ಡಾ.ಯೋಗೀಶ್ವರಪ್ಪ, ಡಾ.ನಂಜುಂಡಪ್ಪ, ಕೆ.ಎಸ್.ಸಿದ್ಧಲಿಂಗಪ್ಪ, ಎಚ್.ಕೆ.ನರಸಿಂಹಮೂರ್ತಿ, ಮರಿಬಸಪ್ಪ, ಟಿ.ಎಸ್.ಆಂಜನಪ್ಪ, ಯೋಗಾನಂದ್, ಪಂಚಾಕ್ಷರಯ್ಯ, ಎಂ.ಎಚ್.ನಾಗರಾಜು ಇದ್ದರು   

ತುಮಕೂರು: ‘ಸದಾ ಕತ್ತಲಿನ ಜತೆ ಬಾಳಿ, ಬದುಕಿದವರ ಕುರಿತು ಬೆಳಕು ಚೆಲ್ಲುವ ಸಾಹಿತ್ಯವಾಗಿ ತತ್ವಪದ ನಮ್ಮ ನಡುವೆ ಉಳಿದುಕೊಂಡು ಬಂದಿದೆ’ ಎಂದು ಲೇಖಕ ಎಸ್.ನಟರಾಜ ಬೂದಾಳು ಅಭಿಪ್ರಾಯಪಟ್ಟರು.

ನಟರಾಜ ಬೂದಾಳು ಅವರ ‘ಸರಹಪಾದ’ ಅನುವಾದಿತ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದ ಸಂದರ್ಭದಲ್ಲಿ ಮಂಗಳವಾರ ವಿವಿಧ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟನೆಗಳು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ತತ್ವಪದಗಳು ಕತ್ತಲ–ರಾತ್ರಿ ಸಾಹಿತ್ಯವಾಗಿದೆ. ಜಾತಿಯ ಹಂಗು ಮೀರಿದವರು, ಹುಟ್ಟಿದ ಜಾತಿ ಮರೆತವರು ತಾತ್ವಿಕತೆಯನ್ನು ಅಳವಡಿಸಿಕೊಂಡ ಸಾಹಿತ್ಯವೇ ತತ್ವಪದವಾಗಿದೆ. ಕನ್ನಡ ಸಾಹಿತ್ಯ ಲೋಕಕ್ಕೆ ಅಪರಿಚಿತವಾದ ತಿಳಿವನ್ನು ಬಹಳ ಪ್ರೀತಿಯಿಂದ ಕೊಟ್ಟಿದೆ. ಅಲ್ಲಮ, ಬಸವಣ್ಣ, ಚೆನ್ನಬಸವಣ್ಣ, ಸಿದ್ಧರಾಮನ ಜತೆಗೆ ಅನುಸಂಧಾನ ಮಾಡಿದಂತೆ ‘ಸರಹಪಾದ’ನೊಟ್ಟಿಗೂ ಪ್ರೀತಿಯಿಂದ ಅನುಸಂಧಾನ ಮಾಡಬೇಕು ಎಂದು ಸಲಹೆ ಮಾಡಿದರು.

ADVERTISEMENT

‘ಅಪರಿಚಿತ ಸತ್ವವವನ್ನು ಕನ್ನಡ ಲೋಕ ಬಿಡಿಸಿಟ್ಟಿದೆ. ಸಿದ್ಧ ಪರಂಪರೆಯಪ್ರಮುಖರಲ್ಲಿ ಒಬ್ಬನಾದ ಸರಹನು ಅಪ್ರಭ್ರಂಶ ಭಾಷೆಯಲ್ಲಿ ಇದ್ದರೂ ಕನ್ನಡ ಸಾಹಿತ್ಯಕ್ಕೆ ಒಗ್ಗುವಂತಹ ತತ್ವಗಳನ್ನು ನೀಡಿದ್ದಾನೆ. ಎಲ್ಲಾ ಭಾಷೆಯ ತತ್ವಜ್ಞಾನಿಗಳನ್ನು ತನ್ನ ತತ್ವಗಳ ಮೂಲಕ ನೀರಿಳಿಸಿದ್ದಾನೆ. ಇಂತಹ ಅನೇಕ ಮಂದಿ ಸಿದ್ಧರ ಸಾಧನೆಗೆ ಶ್ರೀಶೈಲ ಕೇಂದ್ರಸ್ಥಾನವಾಗಿ ಉಳಿದಿತ್ತು. ನಮ್ಮ ಸುತ್ತಲಿನ ಅಲಕ್ಷಿತ ತಾಣಗಳಲ್ಲಿ ಸಿದ್ಧರ ತಾತ್ವಿಕತೆ ಅರಿಯುವ ಪ್ರಯತ್ನ ಯುವ ಸಂಶೋಧಕರಿಂದ ನಡೆಯಬೇಕು. ಅಂತಹವುಗಳನ್ನು ಕತ್ತಲಿನೊಳಗೆ ಹೋಗಿ ದಾಖಲಿಸಬೇಕು. ಯಾವ ವ್ಯಕ್ತಿಗೆ ಕತ್ತಲೆಯ ಪ್ರಜ್ಞೆ ಇರುತ್ತದೆಯೋ ಆತನಿಗೆ ಜ್ಞಾನದ ಅಗತ್ಯ ಇರುತ್ತದೆ’ ಎಂದು ಹೇಳಿದರು.

ಸಂಸ್ಕೃತಿ ಚಿಂತಕ ಎಚ್.ಕೆ.ನರಸಿಂಹಮೂರ್ತಿ, ಸರಹಪಾದ ಕೃತಿ ಕುರಿತು ಮಾತನಾಡಿದರು. ಅಪಭ್ರಂಶ ಭಾಷೆಯಲ್ಲಿದ್ದ ಸರಹನ ದೋಹೆಗಳನ್ನು ಕನ್ನಡ ಸಾಹಿತ್ಯಕ್ಕೆ ತಂದು ಹೊಸ ಸೇರ್ಪಡೆ ಮಾಡಿದ್ದಾರೆ. ಇಂತಹ ಕೃತಿ ಗುರುತಿಸಿ ಗೌರವಿಸುವ ಪ್ರಯತ್ನವನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಮಾಡಿದೆ. ಇದರಿಂದ ಕನ್ನಡ ಭಾಷೆ, ಸಾಹಿತ್ಯವನ್ನು ಮತ್ತಷ್ಟು ಪೋಷಿಸಿದಂತಾಗಿದೆ ಎಂದು ಅಭಿಪ್ರಾಯಪಟ್ಟರು.

ನಿವೃತ್ತ ಉಪನಿರ್ದೇಶಕ ಕೆ.ಎಸ್.ಸಿದ್ಧಲಿಂಗಪ್ಪ, ಸಂಶೋಧಕರಾದ ಡಿ.ಎನ್.ಯೋಗೀಶ್ವರಪ್ಪ, ಡಾ.ಬಿ.ನಂಜುಂಡಸ್ವಾಮಿ, ಎಂ.ಎಚ್.ನಾಗರಾಜು, ಎಸ್.ಕೃಷ್ಣಪ್ಪ, ರೇವಣ್ಣಸಿದ್ಧಪ್ಪ, ಉಪನ್ಯಾಸಕರಾದ ನರಸಿಂಹಮೂರ್ತಿ, ಪಂಚಾಕ್ಷರಯ್ಯ, ದೊಡ್ಡಯ್ಯ, ನಿವೃತ್ತ ಪ್ರಾಚಾರ್ಯರಾದ ಮರಿಬಸಪ್ಪ, ಜಿ.ಎಚ್.ಮಹದೇವಪ್ಪ, ಕೃಷ್ಣಯ್ಯ, ರಮೇಶ್, ಎಂ.ಎಸ್.ಚಿದಾನಂದ, ಎನ್.ಸಿ.ಶಿವಣ್ಣ, ಟಿ.ಎನ್.ಗೋವಿಂದರಾಜು, ಸಾಹಿತಿ ನಾಗಪ್ಪ, ಡಾ.ನರಸಿಂಹಮೂರ್ತಿ, ಟಿ.ಎಸ್.ಆಂಜಿನಪ್ಪ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಯೋಗಾನಂದ್, ಹೆಬ್ಬಾಕ ಸತೀಶ್, ಬೆಳ್ಳಾವಿ ಶಿವಕುಮಾರ್, ಜಯಪ್ರಕಾಶ್ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.