ADVERTISEMENT

ಸಚಿವ ಪರಮೇಶ್ವರ ಹೆಸರು ಬಳಸಿ ₹3.43 ಲಕ್ಷ ಪಡೆದು ವಂಚನೆ

ಉದ್ಯೋಗ ಕೊಡಿಸುವುದಾಗಿ ₹3.43 ಲಕ್ಷ ಪಡೆದು ಮೋಸ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 6:24 IST
Last Updated 22 ಫೆಬ್ರುವರಿ 2026, 6:24 IST
(ಸಾಂದರ್ಭಿಕ ಚಿತ್ರ)
(ಸಾಂದರ್ಭಿಕ ಚಿತ್ರ)   

ತುಮಕೂರು: ‘ಗೃಹ ಸಚಿವ ಜಿ.ಪರಮೇಶ್ವರ ನಮ್ಮ ಸಂಬಂಧಿಕರು, ಅವರ ಜತೆ ಮಾತನಾಡಿ ಗ್ರಾಮ ಆಡಳಿತಾಧಿಕಾರಿ ಹುದ್ದೆ ಕೊಡುಸುತ್ತೇನೆ’ ಎಂದು ನಂಬಿಸಿ ₹3.43 ಲಕ್ಷ ಹಣ ಪಡೆದು ವಂಚಿಸಿದ ಆರೋಪದ ಮೇರೆಗೆ ತಾಲ್ಲೂಕಿನ ಕೋಡಿತಿಮ್ಮನಹಳ್ಳಿ ಗ್ರಾಮದ ಪ್ರವೀಣ್‌ ಕುಮಾರ್‌, ಅವರ ತಂದೆ ರಂಗಪ್ಪ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಉದ್ಯೋಗ ಕೊಡಿಸಲು ₹4 ಲಕ್ಷದಿಂದ ₹5 ಲಕ್ಷ ಖರ್ಚಾಗುತ್ತದೆ. ಮೊದಲಿಗೆ ₹3.50 ಲಕ್ಷ ಕೊಡಿ. ಆದೇಶ ಪ್ರತಿ ಬಂದ ನಂತರ ಉಳಿಕೆ ಹಣ ಕೊಟ್ಟರೆ ಸಾಕು ಎಂದು ಹಣ ಪಡೆದಿದ್ದರು. ಈಗ ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ. ಹಣ ಪಡೆದು ಮೋಸ ಮಾಡಿದವರ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಗುಬ್ಬಿ ಪಟ್ಟಣದ ಎಂ.ಆರ್‌.ಲಾವಣ್ಯಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

ಷೋರೂಮ್‌ನಲ್ಲಿ ಕೆಲಸ ಮಾಡುವಾಗ ಪ್ರವೀಣ್ ಕುಮಾರ್ ಪರಿಚಯವಾಗಿತ್ತು. ಆಗ ಕೆಲಸದ ಬಗ್ಗೆ ಹೇಳಿದ್ದರು. ನನ್ನ ಗಂಡನ ಜತೆಗೆ ಅವರ ಮನೆಗೆ ಹೋದಾಗ ಅಗತ್ಯ ದಾಖಲೆಗಳನ್ನು ಮೊಬೈಲ್‌ನಲ್ಲಿ ಫೋಟೊ ತೆಗೆದುಕೊಂಡಿದ್ದರು. 2023ರ ಜೂನ್‌ ತಿಂಗಳಿನಲ್ಲಿ ಈ ಎಲ್ಲ ಪ್ರಕ್ರಿಯೆಗಳು ನಡೆದಿದ್ದವು. ಹಣ ಪಡೆದ ನಂತರ ಪ್ರವೀಣ್ ಕರೆ ಸ್ವೀಕರಿಸುತ್ತಿಲ್ಲ. ಮನೆಯಲ್ಲೂ ಸಿಗುತ್ತಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ಪರಮೇಶ್ವರ ನಮ್ಮ ಸಂಬಂಧಿಯಾಗಿದ್ದು, ಈಗಾಗಲೇ ನೂರಾರು ಜನರಿಗೆ ಸರ್ಕಾರಿ ಉದ್ಯೋಗ ಕೊಡಿಸಿದ್ದೇನೆ ಎಂದು ನಂಬಿಸಿ ಹಣ ಪಡೆದು ವಂಚಿಸಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.