ADVERTISEMENT

ತಿಪಟೂರು: ಸಂಘರ್ಷ ತಡೆಗೆ ಸೌಹಾರ್ದವೇ ಮದ್ದು

ಕರ್ನಾಟಕ ಭೀಮ ಸೇನೆ ತಾಲ್ಲೂಕು ಘಟಕ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2023, 9:58 IST
Last Updated 7 ಮಾರ್ಚ್ 2023, 9:58 IST
ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಮರಿಸಿದ್ದಯ್ಯನಪಾಳ್ಯ ಗ್ರಾಮದಲ್ಲಿ ಭಾನುವಾರ ಕರ್ನಾಟಕ ಭೀಮ ಸೇನೆಯ ನೂತನ ತಾಲ್ಲೂಕು ಘಟಕವನ್ನು ಕೋಡಿಹಳ್ಳಿ ಆದಿಜಾಂಬವ ಮಠದ ಅಧ್ಯಕ್ಷ ಷಡಕ್ಷರಮುನಿ ಸ್ವಾಮೀಜಿ ಉದ್ಘಾಟಿಸಿದರು
ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಮರಿಸಿದ್ದಯ್ಯನಪಾಳ್ಯ ಗ್ರಾಮದಲ್ಲಿ ಭಾನುವಾರ ಕರ್ನಾಟಕ ಭೀಮ ಸೇನೆಯ ನೂತನ ತಾಲ್ಲೂಕು ಘಟಕವನ್ನು ಕೋಡಿಹಳ್ಳಿ ಆದಿಜಾಂಬವ ಮಠದ ಅಧ್ಯಕ್ಷ ಷಡಕ್ಷರಮುನಿ ಸ್ವಾಮೀಜಿ ಉದ್ಘಾಟಿಸಿದರು   

ತಿಪಟೂರು: ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಮರಿಸಿದ್ದಯ್ಯನಪಾಳ್ಯ ಗ್ರಾಮದಲ್ಲಿ ಭಾನುವಾರ ಕರ್ನಾಟಕ ಭೀಮ ಸೇನೆಯ ನೂತನ ತಾಲ್ಲೂಕು ಘಟಕದ ಉದ್ಘಾಟನೆ ನೆರವೇರಿತು.

ಕೋಡಿಹಳ್ಳಿ ಆದಿಜಾಂಬವ ಮಠದ ಅಧ್ಯಕ್ಷ ಷಡಕ್ಷರಮುನಿ ಸ್ವಾಮೀಜಿ ಮಾತನಾಡಿ, ‘ದಲಿತರು ಮೊದಲು ಶಿಕ್ಷಣ ಪಡೆಯಬೇಕು. ಶಿಕ್ಷಣ, ಸಂಘಟನೆ, ಹೋರಾಟದ ಜೊತೆಗೆ ಸರ್ಕಾರದ ಸವಲತ್ತು ಪಡೆದು ಸಮಾಜದ ಮುಖ್ಯವಾಹಿನಿಯಲ್ಲಿ ಬದುಕಬೇಕು’
ಎಂದರು.

ದಲಿತರು ಹಾಳಾಗಬೇಕು ಎಂದು ಯಾವುದೇ ಸಮುದಾಯಗಳು ಬಯಸುವುದಿಲ್ಲ. ನಮ್ಮಲ್ಲಿರುವ ಕೀಳರಿಮೆ ಬಿಟ್ಟು ಬೇರೆ ಸಮುದಾಯಗಳೊಂದಿಗೆ ಸೌಹಾರ್ದಯುತವಾಗಿ ಬದುಕಿದಾಗ ಯಾವುದೇ ಸಂಘರ್ಷ ಇರುವುದಿಲ್ಲ. ನಾವು ಪಡೆಯುವ ಶಿಕ್ಷಣ ನಮ್ಮ ಬದುಕಿನ ದಾರಿ ರೂಪಿಸುತ್ತದೆ. ಆದ್ದರಿಂದ ಮಕ್ಕಳಿಗೆ ಶಿಕ್ಷಣ ನೀಡುವ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ADVERTISEMENT

ಉತ್ತಮ ಶಿಕ್ಷಣ ಪಡೆದು ಆರ್ಥಿಕ ಹಾಗೂ ಸಾಮಾಜಿಕವಾಗಿ ಮುಂದೆ ಬಂದಾಗ ಸಮಾಜ ನಮ್ಮನ್ನು ಗುರುತಿಸಿ ಗೌರವಿಸುತ್ತದೆ. ದಲಿತ ಎಂಬುದು ಸ್ವಾಭಿಮಾನ, ಒಗ್ಗಟ್ಟಿನ ಸೂಚಕವಾದ ಪದ. ಸರ್ವ ಜನಾಂಗಗಳಿಂದ ಅನ್ಯಾಯಕ್ಕೆ ಒಳಗಾದವರನ್ನು ‘ದಲಿತರು’ ಎಂದು ಸೂಚಕವಾಗಿ ಹೇಳಲಾಗುತ್ತದೆ. ಪ್ರತಿಯೊಬ್ಬರು ಅಂಬೇಡ್ಕರ್‌ ಅವರು ಹಾಕಿಕೊಟ್ಟಿರುವ ದಾರಿಯಲ್ಲಿ ನಡೆದು ಗೌರವದಿಂದ ಜೀವನ ನಡೆಸಿದಾಗ ಜೀವನ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.

ಬಿಎಸ್‌ಪಿ ಮುಖಂಡ ಜಿ. ನಾರಾಯಣ್ ಮಾತನಾಡಿ, ‘ದಲಿತರು ಜಾಗೃತರಾಗಬೇಕು. ಶಿಕ್ಷಣ, ಸಂಘಟನೆಯ ಜೊತೆಗೆ ತಮ್ಮ ಹಕ್ಕುಗಳ ಬಗ್ಗೆ ಅರಿವು ಹೊಂದಬೇಕಾಗಿದೆ’ ಎಂದು ಸಲಹೆ ನೀಡಿದರು.‌

ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಶ್ರಮದ ಫಲವಾಗಿ ಮತದಾನದ ಹಕ್ಕು ದೊರೆತಿದೆ. ಇದನ್ನು ನ್ಯಾಯಯುತವಾಗಿ ಚಲಾಯಿಸಬೇಕು. ಮತವನ್ನು ಮಾರಿಕೊಳ್ಳಬಾರದು. ಪ್ರತಿಯೊಬ್ಬರು ಕಾನೂನಿನ ದೃಷ್ಟಿಯಲ್ಲಿ ಸಮಾನರು. ಎಲ್ಲಾ ಸಮಾಜಗಳು ಸೌಹಾರ್ದದಿಂದ ಬದುಕಿ ಜೀವನ ನಡೆಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥಾಪಕ ಅಧ್ಯಕ್ಷ ಶಂಕರ ರಾಮಲಿಂಗಯ್ಯ, ಮುಖಂಡರಾದ ದೇವಿಪ್ರಸಾದ್, ಸಂಪತ್ ಕುಮಾರ್, ತಾಲ್ಲೂಕು ಅಧ್ಯಕ್ಷ ಮಂಜುನಾಥ್, ಲಕ್ಷ್ಮಯ್ಯ, ಮಾದಿಗ ದಡೋರ ಅಧ್ಯಕ್ಷ ಕುಪ್ಪಾಳು ರಂಗಸ್ವಾಮಿ, ವಕೀಲ ಚನ್ನಕೇಶವ, ಬಸವರಾಜು, ಬಾಗುವಾಳ ಲಿಂಗರಾಜು, ಈಡೇನಹಳ್ಳಿ ಕಾಂತರಾಜು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.