ADVERTISEMENT

ಗೊರೂರು ನೀರಿನ ಮಟ್ಟ ಏರಿಕೆ: ನಾಲೆಗಳಿಗೆ ನೀರು ಹರಿಸುತ್ತಿಲ್ಲವೇಕೆ?

​ಪ್ರಜಾವಾಣಿ ವಾರ್ತೆ
Published 21 ಜುಲೈ 2021, 5:50 IST
Last Updated 21 ಜುಲೈ 2021, 5:50 IST
ಹೇಮಾವತಿ ನಾಲೆ
ಹೇಮಾವತಿ ನಾಲೆ   

ತುಮಕೂರು: ಗೊರೂರು ಜಲಾಶಯದ ನೀರಿನ ಮಟ್ಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದರೂ ಜಿಲ್ಲೆಗೆ ನೀರು ಹರಿಸಲು ಆಗಿರುವ ಸಮಸ್ಯೆಯಾದರೂ ಏನು ಎಂಬುದು ಹಲವರ ಪ್ರಶ್ನೆಯಾಗಿದೆ. ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ಮತ್ತಷ್ಟು ತಡವಾಗಬಹುದು ಎಂದು ಹೇಳಲಾಗುತ್ತಿದೆ.

ಜಲಾಶಯ ಭರ್ತಿಯಾಗುತ್ತಿರುವುದನ್ನು ನೋಡಿದರೆ ನೀರು ಹರಿಸುವ ಪ್ರಕ್ರಿಯೆ ಆರಂಭಿಸಬೇಕಿತ್ತು. ನಾಲೆಗೆ ನೀರು ಬಿಡಲು ಏಕೆ ತಡ ಮಾಡುತ್ತಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ರೈತರು, ರೈತ ಮುಖಂಡರು, ರಾಜಕೀಯ ಪಕ್ಷಗಳ ಮುಖಂಡರು ಕೇಳುತ್ತಿದ್ದಾರೆ.

ಹೇಮಾವತಿ ಜಲಾನಯನ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಸತತವಾಗಿ ಮಳೆಯಾಗುತ್ತಿದ್ದು, ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣದಲ್ಲೂ ಏರಿಕೆಯಾಗಿದೆ. ಒಳಹರಿವು ಹೆಚ್ಚುತ್ತಲೇ ಸಾಗಿದ್ದು, ಕಳೆದ ಒಂದು ವಾರದಲ್ಲಿ ನೀರಿನ ಮಟ್ಟ 10 ಅಡಿಗಳಷ್ಟು ಏರಿಕೆ ಕಂಡಿದೆ. ಈಗಲೂ ಮಳೆ ಸುರಿಯುತ್ತಲೇ ಇದ್ದು, ಸೋಮವಾರದ ವೇಳೆಗೆ 2905 ಅಡಿಗಳಿಗೆ (ಗರಿಷ್ಠ ಮಟ್ಟ– 2922 ಅಡಿಗಳು) ತಲುಪಿದೆ. ಒಳಹರಿವು 10 ಸಾವಿರ ಕ್ಯೂಸೆಕ್ ಇದೆ. ನದಿ ಪಾತ್ರ ಹಾಗೂ ಮಲೆನಾಡಿನಲ್ಲಿ ಮಳೆ ಬಿರುಸಾಗಿರುವುದರಿಂದ ಒಳಹರಿವು ಹೆಚ್ಚುತ್ತಲೇ ಸಾಗಿದೆ.

ADVERTISEMENT

ಜಲಾಶಯದ ಒಳ ಹರಿವು ಹೆಚ್ಚುತ್ತಿರುವುದರಿಂದ ತಕ್ಷಣಕ್ಕೆ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ ನಾಲೆಗಳಿಗೆ ನೀರು ಹರಿಸಲು ನಿರ್ಧರಿಸಬಹುದಿತ್ತು. ನಮ್ಮ ಭಾಗದ ರೈತರಿಗೆ ಹೆಚ್ಚು ಅನುಕೂಲ ಮಾಡಿಕೊಡಬಹುದಿತ್ತು. ಜಲಾಶಯ ಪೂರ್ಣ ಭರ್ತಿಯಾಗುವ ಹಂತ ತಲುಪಿದ ಸಮಯದಲ್ಲಿ ಎಲ್ಲಾ ಹೆಚ್ಚುವರಿ ನೀರನ್ನು ನಾಲೆಗಳಿಗೆ ಹರಿಸಲು ಸಾಧ್ಯವಿಲ್ಲ. ಸ್ವಲ್ಪ ಹೆಚ್ಚು ನೀರು ಬಿಟ್ಟರೂ ತಡೆದುಕೊಳ್ಳುವಷ್ಟು ಗಟ್ಟಿಮುಟ್ಟಾದ ನಾಲೆಗಳೂ ಇಲ್ಲ. ಆಗ ಅನಿವಾರ್ಯವಾಗಿ ನದಿಗೆ ಬಿಡಬೇಕಾಗುತ್ತದೆ. ಜುಲೈ ಮಧ್ಯ ಭಾಗದಲ್ಲೇ ನಾಲೆಗಳಿಗೆ ನೀರು ಬಿಟ್ಟಿದ್ದರೆ ಹೆಚ್ಚುವರಿ ನೀರು ತಮಿಳುನಾಡು ಸೇರುವುದನ್ನು ತಡೆಯಬಹುದಿತ್ತು.

ಜಿಲ್ಲೆಗೆ 24 ಟಿಎಂಸಿ ಅಡಿ ನೀರು ಹಂಚಿಕೆಯಾಗಿದ್ದರೂ, ಈವರೆಗೆ ಹೆಚ್ಚೆಂದರೆ 14 ಟಿಎಂಸಿ ಅಡಿವರೆಗೆ ಬಳಸಿಕೊಳ್ಳಲು ಸಾಧ್ಯವಾಗಿದೆ. ಯಾವ ವರ್ಷವೂ ಪೂರ್ಣ ಪ್ರಮಾಣದಲ್ಲಿ ನೀರು ಹರಿಸಿಲ್ಲ. ನೀರು ಬಿಡುವುದು ತಡವಾಗುತ್ತದೆ, ಕೊನೆಗೆ ನದಿ ಪಾತ್ರದಲ್ಲೂ ಮಳೆ ಕಡಿಮೆಯಾಗಿ ಒಳ ಹರಿವು ತಗ್ಗುತ್ತದೆ. ಸಹಜವಾಗಿ ಜಲಾಶಯದ ನೀರಿನ ಮಟ್ಟ ಕಡಿಮೆಯಾಗುತ್ತಿದ್ದಂತೆ ನೀರು ಹರಿಸುವುದನ್ನು ನಿಲ್ಲಿಸಲಾಗುತ್ತದೆ. ಸಕಾಲದಲ್ಲಿ ನಿರ್ಧಾರ ಕೈಗೊಳ್ಳದಿರುವುದರಿಂದ ಜಿಲ್ಲೆಯ ಜನರು ಪ್ರತಿ ವರ್ಷವೂ ಹೇಮಾವತಿ ನೀರಿನಿಂದ ವಂಚಿತರಾಗುತ್ತಲೇ ಇದ್ದಾರೆ. ನಾಲೆಯ ಕೊನೆ ಭಾಗಕ್ಕೆ ನೀರು ತಲುಪುವುದೇ ಇಲ್ಲ, ಕೆರೆಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗುವುದಿಲ್ಲ. ನೀರು ಹರಿಸಿ ಎಂದು ಹೋರಾಟ ನಡೆಸುವುದೂ ನಿಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.