ADVERTISEMENT

ತುಮಕೂರು |ಅತ್ಯಾಚಾರ: ಪರೀಕ್ಷೆ ಬರೆಯಲಾಗದ ಸಂತ್ರಸ್ತ ಬಾಲಕಿ

ತೀವ್ರ ರಕ್ತಸ್ರಾವ: ಚಿಕಿತ್ಸೆ ನಂತರ ಚೇತರಿಕೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2024, 17:21 IST
Last Updated 7 ಮಾರ್ಚ್ 2024, 17:21 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ತುಮಕೂರು: ನಗರದ ಸಿದ್ಧಗಂಗಾ ಮಠದ ಬಳಿ ಮಾರ್ಚ್ 4ರಂದು ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಬಾಲಕಿ ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಬೇಕಿತ್ತು.

ಈ ಅಮಾನವೀಯ ಕೃತ್ಯ ನಡೆದು ಐದು ದಿನವಾಗಿದ್ದು, ಬಾಲಕಿ ಪರೀಕ್ಷೆಯಿಂದ ವಂಚಿತಳಾಗಿದ್ದಾಳೆ. ಪರೀಕ್ಷೆ ಬರೆಯಬೇಕಿದ್ದ ಬಾಲಕಿ ಆಸ್ಪತ್ರೆಯಲ್ಲಿ ನರಳುವಂತಾಗಿದೆ. ತೀವ್ರ ರಕ್ತಸ್ರಾವದಿಂದ ಬಳಲಿದ ಬಾಲಕಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಲಕಿ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದಾಳೆ. 

ADVERTISEMENT

ಮಠದ ಜಾತ್ರೆಗೆ ತೆರಳಿದ್ದ ವಿದ್ಯಾರ್ಥಿನಿ ಮೇಲೆ ಇಬ್ಬರು ಅತ್ಯಾಚಾರ ಎಸಗಿದ್ದರು. ಈ ಸಂಬಂಧಿಸಿದಂತೆ ಅಮೋಘ (22), ಹನುಮಂತ (20), ಪ್ರತಾಪ್ (23) ಎಂಬವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. 

ಹನುಮಂತ, ಅಮೋಘ ಅತ್ಯಾಚಾರ ಎಸಗಿದ್ದು, ಪ್ರತಾಪ್ ಎಂಬಾತ ಬಾಲಕಿಯನ್ನು ಕರೆತರಲು ಸಹಾಯ ಮಾಡಿದ್ದ ಎನ್ನಲಾಗಿದೆ. ಪೊಲೀಸರು ಬಾಲಕಿಯ ಹೇಳಿಕೆ ಪಡೆದು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಮಠದಲ್ಲಿದ್ದ ಆರೋಪಿಗಳು: ಆರೋಪಿಗಳು ಕ್ಯಾಟರಿಂಗ್ ಕೆಲಸ ಮಾಡಿಕೊಂಡು ಸಿದ್ಧಗಂಗಾ ಮಠದಲ್ಲಿ ವಾಸವಿದ್ದರು. ಇತ್ತೀಚೆಗೆ ಮಠದಿಂದ ಹೊರ ಬಂದು ಬಂಡೆಪಾಳ್ಯದ ಬಳಿ ಬಾಡಿಗೆ ರೂಮ್ ಪಡೆದುಕೊಂಡು ಅಲ್ಲಿಯೇ ಇದ್ದರು. 

ಬಾಲಕಿ ತನ್ನ ಸ್ನೇಹಿತನ ಜೊತೆಗೆ ಮಠದ ಜಾತ್ರೆಗೆ ಹೋಗುತ್ತಿದ್ದಳು. ಇಬ್ಬರು ಮಾರ್ಗಮಧ್ಯೆ ಮರದ ಕೆಳಗಡೆ ಕೂತಿದ್ದರು. ಆರೋಪಿಗಳು ಇದನ್ನು ಗಮನಿಸಿ ವಿಡಿಯೊ ಮಾಡಿಕೊಂಡಿದ್ದಾರೆ. ಈ ವಿಡಿಯೊವನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿ ಬಿಡುವುದಾಗಿ ಬಾಲಕಿ ಮತ್ತು ಆಕೆಯ ಸ್ನೇಹಿತನಿಗೆ ಬೆದರಿಕೆ ಹಾಕಿದ್ದಾರೆ.

ನಂತರ ಆರೋಪಿಗಳು ಬಾಲಕಿಯನ್ನು ಬೈಕ್ ಮೇಲೆ ಬಂಡೆಪಾಳ್ಯದ ಬಳಿಯ ರೂಮಿಗೆ ಕರೆದೊಯ್ದು ಕೃತ್ಯ ಎಸಗಿದ್ದರು. ಬಳಿಕ ಬಾಲಕಿಯನ್ನು ಕರೆತಂದು ಮಠದ ಬಳಿ ಬಿಟ್ಟು ಹೋಗಿದ್ದರು. ಬಾಲಕಿ ಸ್ನೇಹಿತ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.