ADVERTISEMENT

ಜ್ಞಾನಭಿಕ್ಷಾ ಪಾದಯಾತ್ರಿ ಭೇಟಿ

ವಿದ್ಯಾರ್ಥಿಗಳ ಜೊತೆ ಸಂವಾದ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2021, 4:19 IST
Last Updated 1 ಅಕ್ಟೋಬರ್ 2021, 4:19 IST
ಮಧುಗಿರಿ ತಾಲ್ಲೂಕಿನ ಐಡಿಹಳ್ಳಿಗೆ ಎಚ್.ಕೆ. ವಿವೇಕಾನಂದ ಬುಧವಾರ ಭೇಟಿ ನೀಡಿದಾಗ ಅವರನ್ನು ಸ್ವಾಗತಿಸಿ ಪಾದಯಾತ್ರೆಯಲ್ಲಿ ಜೊತೆಯಾದ ಗ್ರಾಮಸ್ಥರು
ಮಧುಗಿರಿ ತಾಲ್ಲೂಕಿನ ಐಡಿಹಳ್ಳಿಗೆ ಎಚ್.ಕೆ. ವಿವೇಕಾನಂದ ಬುಧವಾರ ಭೇಟಿ ನೀಡಿದಾಗ ಅವರನ್ನು ಸ್ವಾಗತಿಸಿ ಪಾದಯಾತ್ರೆಯಲ್ಲಿ ಜೊತೆಯಾದ ಗ್ರಾಮಸ್ಥರು   

ಕೊಡಿಗೇನಹಳ್ಳಿ: ‘ಒಬ್ಬನೇ ನಡೆಯುವಾಗ ನಾನು ನಡೆಯುತ್ತಿರುವ ದಾರಿ ಬೇಗ ಕೊನೆಯಾಗಲಿ ಎಂದು ಅನಿಸುತ್ತಿತ್ತು. ಆದರೆ, ಇಂದು ನೀವೆಲ್ಲರೂ ಜೊತೆಯಾಗಿರುವಾಗ ನಾನು ನಡೆಯುತ್ತಿರುವ ದಾರಿ ಎಂದಿಗೂ ಕೊನೆಯಾಗದಿರಲಿ ಎಂದು ಅನಿಸುತ್ತಿದೆ’

ಹೀಗೆಂದು ಹೇಳಿದ್ದು ಸುಮಾರು 10 ಸಾವಿರ ಕಿಲೋಮೀಟರ್‌ಗಳನ್ನು 334 ದಿನಗಳಲ್ಲಿ ಕ್ರಮಿಸಿದ ಮಾನವೀಯ ಮೌಲ್ಯಗಳ ಪುನರುತ್ಥಾನದ ಜ್ಞಾನಭಿಕ್ಷಾ ಪಾದಯಾತ್ರಿ ವಿವೇಕಾನಂದ ಎಚ್.ಕೆ.

ನ. 1ರಿಂದ ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕು ವನಮಾರಪಲ್ಲಿಯಿಂದ ರಾಜ್ಯದ ಎಲ್ಲಾ ತಾಲ್ಲೂಕುಗಳನ್ನು ಕಾಲ್ನಡಿಗೆಯಲ್ಲಿ ಸುತ್ತುವ ಸಂಕಲ್ಪದಿಂದ ಹೊರಟಿರುವ ಅವರು, ಬುಧವಾರ ಮಧ್ಯಾಹ್ನ ಮಧುಗಿರಿ ತಾಲ್ಲೂಕಿನ ಐಡಿಹಳ್ಳಿಯ ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದ್ದರು. ಅಲ್ಲಿನ ಮಕ್ಕಳೊಂದಿಗೆ ಅರ್ಥಪೂರ್ಣವಾದ ಸಂವಾದ ನಡೆಸಿದರು.

ADVERTISEMENT

ಕಳೆದ 25 ವರ್ಷಗಳಿಂದ ಎಲ್ಲಾ ಕ್ಷೇತ್ರಗಳಲ್ಲೂ ನಿರಂತರವಾಗಿ ಕುಸಿಯುತ್ತಿರುವ ಮಾನವೀಯ ಮೌಲ್ಯಗಳನ್ನು ಉಳಿಸುವ ಮತ್ತು ಬೆಳೆಸುವ ಜವಾಬ್ದಾರಿ ಈ ಸಮಾಜದ ಮೇಲಿದೆ. ಮುಖ್ಯವಾಗಿ ಮುಂದಿನ 15 ವರ್ಷಗಳಲ್ಲಿ ಇಂದಿನ ಯುವಪೀಳಿಗೆ ಬೆಳವಣಿಗೆ ಹೊಂದುವ ಸಂದರ್ಭದಲ್ಲಿ ಅವರನ್ನು ಹೆಚ್ಚು ಮಾನವೀಯವಾಗಿ ಜಾಗೃತಗೊಳಿಸಬೇಕಾಗಿದೆ ಎಂದು ಹೇಳಿದರು.

ತಂತ್ರಜ್ಞಾನ ಎಷ್ಟೇ ಬೆಳೆದರೂ ಮಾನವೀಯ ಮೌಲ್ಯಗಳಿಲ್ಲದ ಆಧುನಿಕತೆಗೆ ಯಾವುದೇ ಅರ್ಥ ಇರುವುದಿಲ್ಲ. ಹಣವೇ ಪ್ರಧಾನವಾದ ಈ ಸಮಾಜದಲ್ಲಿ ಸಂಬಂಧಗಳು ಅರ್ಥ ಕಳೆದುಕೊಳ್ಳುತ್ತವೆ. ಶಿಕ್ಷಣವೆಂಬುದು ಮಾನವೀಯತೆಯ ವಿಕಾಸವೇ ಹೊರತು ಅಂಕ, ಅಧಿಕಾರ ಅಥವಾ ಸಂಬಳದ ಮೇಲೆ ನಿರ್ಧಾರವಾಗಬಾರದು ಎಂದು ಪ್ರತಿಪಾದಿಸಿದರು.

ಪರಿಸರದ ಮೇಲಿನ ದಾಳಿಯಿಂದಾಗಿ ನೀರು, ಗಾಳಿ ಮತ್ತು ಆಹಾರ ಕಲುಷಿತವಾಗಿ ಅದರ ಪರೋಕ್ಷ ಪರಿಣಾಮದಿಂದ ಮನುಷ್ಯನ ದೇಹ ಮತ್ತು ಮನಸ್ಸು ಹ ಸಂಕುಚಿತಗೊಳ್ಳುತ್ತಿದೆ ಎಂದರು.

ಐಡಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ನರಸಿಂಹರೆಡ್ಡಿ, ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮಂಜುನಾಥ್, ಪ್ರೌಢಶಾಲೆಯ ಮುಖ್ಯಶಿಕ್ಷಕ ರಂಗನಾಥ್, ಮುಖಂಡರಾದ ವೇಣುರೆಡ್ಡಿ, ಮುಖಂಡರಾದ ಬಾಲಕೃಷ್ಣ, ತಿಪ್ಪಾಪುರ ಮೈಲಾರಪ್ಪ, ಬಡಕನಹಳ್ಳಿ ರಾಜಣ್ಣ, ಗ್ರಾಮ ಪಂಚಾಯಿತಿ ಸದಸ್ಯ ನರಸಿಂಹಮೂರ್ತಿ, ಜಿಲಾನ್ ಹಾಗೂ ವಿದ್ಯಾರ್ಥಿಗಳು
ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.