ADVERTISEMENT

ಸೌಲಭ್ಯ ವಂಚಿತ ಗೊಲ್ಲರಹಟ್ಟಿ

ಕೃಷ್ಣ ಜಯಂತಿ ಆಚರಣೆಯಲ್ಲಿ ಚಂದ್ರಶೇಖರ್‌ಗೌಡ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 6:01 IST
Last Updated 17 ಆಗಸ್ಟ್ 2025, 6:01 IST
ತುಮಕೂರಿನಲ್ಲಿ ಶನಿವಾರ ಶ್ರೀಕೃಷ್ಣ ಜಯಂತಿ ಪ್ರಯುಕ್ತ ನಡೆದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸಮುದಾಯದ ಮುಖಂಡರು
ತುಮಕೂರಿನಲ್ಲಿ ಶನಿವಾರ ಶ್ರೀಕೃಷ್ಣ ಜಯಂತಿ ಪ್ರಯುಕ್ತ ನಡೆದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸಮುದಾಯದ ಮುಖಂಡರು   

ತುಮಕೂರು: ಗೊಲ್ಲರ ಹಟ್ಟಿಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸುವ ಕೆಲಸ ನೆನೆಗುದಿಗೆ ಬಿದ್ದಿದೆ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷರೂ ಆದ ಜಿಲ್ಲಾ ಗೊಲ್ಲ (ಯಾದವ) ಸಂಘದ ಅಧ್ಯಕ್ಷ ಜಿ.ಚಂದ್ರಶೇಖರ್‌ಗೌಡ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರ ಜಿಲ್ಲಾ ಆಡಳಿತ, ಜಿಲ್ಲಾ ಗೊಲ್ಲ (ಯಾದವ) ಸಂಘದಿಂದ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಐತಿಹಾಸಿಕ, ಸಾಂಸ್ಕೃತಿಕ ಶ್ರೀಮಂತಿಕೆ ಇದ್ದರೂ ಗೊಲ್ಲರಹಟ್ಟಿಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿವೆ. ಕುಡಿಯುವ ನೀರು, ರಸ್ತೆ ಸೇರಿದಂತೆ ಹಲವು ಕೊರತೆಗಳಿವೆ. ಇದು ಮರೆಯಾಗಬೇಕಾದರೆ ನಾವು ವಿಶಾಲ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ADVERTISEMENT

ಶಾಸಕ ಜಿ.ಬಿ.ಜೋತಿಗಣೇಶ್‌, ‘ಶ್ರೀಕೃಷ್ಣ ಕೇವಲ ಒಂದು ಪ್ರದೇಶ, ಸಮುದಾಯಕ್ಕೆ ಸೀಮಿತವಲ್ಲ. ಸಮಾಜದಲ್ಲಿ ಮನುಷ್ಯ ಬೆಳೆಯಲು ವೀರಭದ್ರನ ಅವತಾರದಿಂದ ಏನು ಪ್ರಯೋಜನವಿಲ್ಲ. ಕೃಷ್ಣನ ತಾಳ್ಮೆ, ಜಾಣ್ಮೆ ಮೈಗೂಡಿಸಿಕೊಳ್ಳಬೇಕು’ ಎಂದರು.

ಗೊಲ್ಲ ಸಮುದಾಯದ ಮುಖಂಡ ಜಿ.ಎನ್.ಬೆಟ್ಟಸ್ವಾಮಿ, ‘ಕೃಷ್ಣ ರಾಜನೀತಿ ನಿಪುಣ. ಸಾವಿರಾರು ವರ್ಷಗಳ ಹಿಂದೆ ಆತ ಬೋಧಿಸಿದ ಭಗವದ್ಗೀತೆ ಇಂದಿನ ರಾಜಕೀಯ ವ್ಯವಸ್ಥೆಗೆ ಪೂರಕವಾಗಿದೆ. ಪ್ರತಿಯೊಬ್ಬರು ತಮ್ಮ ಜವಾಬ್ದಾರಿ ಅರಿತು, ಸ್ವಜಾತಿ, ಸ್ವಧರ್ಮ ಬದಿಗಿಟ್ಟು ಕೆಲಸ ಮಾಡಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ’ ಎಂದು ಸ್ಮರಿಸಿದರು.

ಮುಖಂಡ ಮಹಾಲಿಂಗಯ್ಯ, ‘ಭಗವದ್ಗೀತೆ ಮಕ್ಕಳಿಗೆ ಪಠ್ಯವಾದರೆ ಹಲವು ಸಮಸ್ಯೆಗೆ ಪರಿಹಾರ ದೊರೆಯಲಿದೆ. ಗೊಲ್ಲ ಸಮುದಾಯ ರಾಜಕೀಯ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿದೆ. ಕಾಲಕ್ಕೆ ತಕ್ಕಂತೆ ಬದಲಾದರೆ ಮಾತ್ರ ಮುಖ್ಯ ವಾಹಿನಿಗೆ ಬರಲು ಸಾಧ್ಯ’ ಎಂದು ಹೇಳಿದರು.

ಮುಖಂಡರಾದ ಷಣ್ಮುಖಪ್ಪ, ಚೆಂಗಾವರ ಕರಿಯಪ್ಪ, ವೀರಣ್ಣಗೌಡ, ಚಿಕ್ಕೇಗೌಡ, ಅಕ್ಕಪ್ಪ, ಚಿಕ್ಕಪ್ಪಯ್ಯ, ಎಸ್.ಚಿಕ್ಕರಾಜು, ಸುವರ್ಣಮ್ಮ, ಚಂದ್ರಕಲಾ, ಪುಟ್ಟರಾಜು, ರಂಗನಾಥ್, ಕುಣಿಹಳ್ಳಿ ಮಂಜುನಾಥ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್‌ ಕು.ಮಿರ್ಜಿ ಇತರರು ಹಾಜರಿದ್ದರು.

ಮುಖಂಡರಾದ ಪೂಜಾರ್‌ ಚಿತ್ತಯ್ಯ, ಬಿ.ವಿ.ವೆಂಕಟರಮಣಪ್ಪ, ನೀಲಮ್ಮ, ಜಯಣ್ಣ ಬೆಳಗೆರೆ ಅವರನ್ನು ಸನ್ಮಾನಿಸಲಾಯಿತು. ಜಯಂತಿ ಪ್ರಯುಕ್ತ ಟೌನ್‌ಹಾಲ್‌ ವೃತ್ತದಿಂದ ಗುಬ್ಬಿ ವೀರಣ್ಣ ಕಲಾ ಕ್ಷೇತ್ರದ ವರೆಗೆ ಮೆರವಣಿಗೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.