ADVERTISEMENT

ಶಿರಾದ ಶೇ 50ರಷ್ಟು ಹಳ್ಳಿಗಳಿಗೆ ರಸ್ತೆ, ನೀರಿಲ್ಲ

ಕಾಂಗ್ರೆಸ್, ಜೆಡಿಎಸ್ ವಿರುದ್ಧ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2020, 4:02 IST
Last Updated 27 ಅಕ್ಟೋಬರ್ 2020, 4:02 IST
ಗೋವಿಂದ ಕಾರಜೋಳ
ಗೋವಿಂದ ಕಾರಜೋಳ   

ತುಮಕೂರು: ‘ಶಿರಾ ವಿಧಾನಸಭಾ ಕ್ಷೇತ್ರದ ಶೇಕಡ 50ರಷ್ಟು ಹಳ್ಳಿಗಳಲ್ಲಿ ರಸ್ತೆ, ಕುಡಿಯುವ ನೀರಿಲ್ಲ. 154 ಗೊಲ್ಲರಹಟ್ಟಿಗಳಿಗೆ ರಸ್ತೆಗಳಿಲ್ಲ. ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ತಾಲ್ಲೂಕು ಎನಿಸಿದೆ’ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಟೀಕಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಕಾಂಗ್ರೆಸ್ ಮತ್ತು ಜೆಡಿಎಸ್‌ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರೂ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಗೊಲ್ಲರಹಟ್ಟಿಗಳಲ್ಲಿ ಜನರು ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ. ಜಯಚಂದ್ರ ಅವರು ಈ ಜನರಿಗೆ ಮನೆ ಕಟ್ಟಿಸಿಕೊಡಬಹುದಿತ್ತು. ಆದರೆ, ಸರ್ಕಾರದ ಯೋಜನೆಗಳನ್ನೇ ಜನರಿಗೆ ತಲುಪಿಸಿಲ್ಲ. ಸರ್ವರಿಗೂ ಸಮಪಾಲು, ಸಾಮಾಜಿಕ ನ್ಯಾಯವನ್ನು ಈ ಕ್ಷೇತ್ರದಲ್ಲಿ ಯಾರೂ ಕಲ್ಪಿಸಿಲ್ಲ’ ಎಂದು ಆರೋಪಿಸಿದರು.

ಬಿಜೆಪಿ ಅಭ್ಯರ್ಥಿ ರಾಜೇಶ್‌ಗೌಡ 15 ವರ್ಷಗಳಿಂದ ವೈದ್ಯರಾಗಿ ತಮ್ಮ ಕೈಲಾದಷ್ಟು ಬಡವರ ಸೇವೆ ಮಾಡಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ ಎನ್ನುವುದು ಜನರಿಗೂ ಗೊತ್ತು. ಈ ಬಾರಿ ಜನರು ಉತ್ಸಾಹದಿಂದ ಬಿಜೆಪಿ ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

‘ಪರಿಶಿಷ್ಟರು, ಅಲ್ಪಸಂಖ್ಯಾತರಿಗೆ ಭಯ ಹುಟ್ಟಿಸಿ ದೇಶದಲ್ಲಿ ಕಾಂಗ್ರೆಸ್ ಮತ ಪಡೆಯುತ್ತಿತ್ತು. ಆದರೆ ಕಾಂಗ್ರೆಸ್‌ನ ಬೊಗಳೆ ಈಗ ನಡೆಯುತ್ತಿಲ್ಲ. ಕಾಂಗ್ರೆಸ್ ಈ ದೇಶದ ಪರಿಶಿಷ್ಟರಿಗೆ ಅಪಾರವಾಗಿ ಅನ್ಯಾಯ ಮಾಡಿದೆ. ದೇಶದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಕಾಂಗ್ರೆಸ್ ತಿರಸ್ಕರಿಸಿದ್ದಾರೆ. ಆದ್ದರಿಂದ 23 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ’ ಎಂದು ಹೇಳಿದರು.

ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ 1971ರಿಂದ ಇಲ್ಲಿಯವರೆಗೆ 8 ಸಲ ಗೆದ್ದಿದೆ. ಈ ಬಾರಿ ಚಿದಾನಂದಗೌಡ ಅತಿಹೆಚ್ಚು ಮತಗಳಿಂದ ಗೆಲ್ಲುವರು. ಈಗಾಗಲೇ 150 ಬೂತ್‌ಗಳಲ್ಲಿ ಪ್ರಚಾರ ಮಾಡಿದ್ದಾರೆ. 32 ತಾಲ್ಲೂಕುಗಳಲ್ಲಿ ಪ್ರವಾಸ ನಡೆಸಿದ್ದಾರೆ ಎಂದರು.

ಆಗ್ನೇಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಿದಾನಂದಗೌಡ ಮಾತನಾಡಿ, ‘ಕ್ಷೇತ್ರದಲ್ಲಿ ನಾಲ್ಕು ಬಾರಿ ಸುತ್ತಾಟ ನಡೆಸಿದ್ದೇನೆ. ನಮಗೆ ಪೂರಕ ವಾತಾವರಣ ಇದೆ. ಪದವೀಧರ ಮತದಾರರು ಪ್ರಜ್ಞಾವಂತರು. ಅವರು ಬಿಜೆಪಿ ಬೆಂಬಲಿಸುತ್ತಾರೆ’ ಎಂದು ಹೇಳಿದರು.

ಸಂಸದ ಜಿ.ಎಸ್. ಬಸವರಾಜ್, ಶಾಸಕ ಜಿ.ಬಿ. ಜ್ಯೋತಿಗಣೇಶ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.