
ತುಮಕೂರು: ಆಗ್ನೇಯ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಪದವೀಧರರು ಹಾಗೂ ಯುವ ಸಮೂಹ ನಿರಾಸಕ್ತಿ ತೋರುತ್ತಿದ್ದು, ನೋಂದಣಿಗೆ ಸಾಕಷ್ಟು ಮಂದಿ ಮುಂದಾಗುತ್ತಿಲ್ಲ.
2022ರ ನವೆಂಬರ್ ಪೂರ್ವದಲ್ಲಿ ಪದವಿ ಪೂರ್ಣಗೊಳಿಸಿದವರು ಮತದಾನ ಮಾಡಲು ಅರ್ಹರು. ಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳಲು ನ. 6ರ ಕೊನೆಯ ದಿನವಾಗಿದೆ. ಎಲ್ಲಾ ತಾಲ್ಲೂಕು ಕಚೇರಿ, ಮಹಾನಗರ ಪಾಲಿಕೆ ಕಚೇರಿಯಲ್ಲಿ ಅರ್ಜಿ ಸಲ್ಲಿಸಲು ಅನುವು ಮಾಡಿಕೊಡಲಾಗಿದೆ. ನಿರೀಕ್ಷಿತ ಮಟ್ಟದಲ್ಲಿ ನೋಂದಣಿ ಆಗುತ್ತಿಲ್ಲ. ಅ. 31ರ ವರೆಗೆ 11,162 ಮಂದಿ ಮಾತ್ರ ಫಾರ್ಮ್ 18 ಸಲ್ಲಿಸಿ, ನೋಂದಣಿ ಮಾಡಿಸಿಕೊಂಡಿದ್ದಾರೆ. ಇದೇ ವೇಗದಲ್ಲಿ ನಡೆದರೆ 20 ಸಾವಿರ ದಾಟುವುದೂ ಕಷ್ಟಕರ ಎಂದು ಹೇಳಲಾಗುತ್ತಿದೆ.
ಈ ಹಿಂದಿನ ಚುನಾವಣೆಯಲ್ಲಿ ಮತದಾನ ಮಾಡಿದವರು ಸಹ ಮತ್ತೊಮ್ಮೆ ನೋಂದಣಿ ಮಾಡಿಕೊಳ್ಳಬೇಕು. ಪದವೀಧರರ ಕ್ಷೇತ್ರ, ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ನಡೆದ ಪ್ರತಿ ಸಲವೂ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ಹೊಸದಾಗಿ ನೋಂದಾಯಿಸಿ ಕೊಂಡವರಿಗಷ್ಟೇ ಮತದಾನಕ್ಕೆ ಅವಕಾಶ ಸಿಗಲಿದೆ. ಈಗ ಅಗತ್ಯ ದಾಖಲೆ ಸಲ್ಲಿಸಿ ನೋಂದಣಿ ಮಾಡಿಕೊಂಡರೆ ಮಾತ್ರ ಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ. ಇದಕ್ಕೆ ಜಿಲ್ಲೆಯಾದ್ಯಂತ ನೀರಸ ಸ್ಪಂದನೆ ವ್ಯಕ್ತವಾಗುತ್ತಿದೆ.
2020ರಲ್ಲಿ ಆಗ್ನೇಯ ಪದವೀಧರರ ಕ್ಷೇತ್ರಕ್ಕೆ ಚುನಾವಣೆ ನಡೆದಿತ್ತು. ಆಗ ಜಿಲ್ಲೆಯಲ್ಲಿ 29,415 ಮಂದಿ ಮತದಾರರು ನೋಂದಣಿಯಾಗಿದ್ದರು. ಮೊದಲ ಹಂತದಲ್ಲಿಯೇ 21,991 ಜನ ಅರ್ಜಿ ಹಾಕಿದ್ದರು. ಈಗ ಇಷ್ಟು ಮತದಾರರನ್ನು ತಲುಪಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.
ಶಿರಾ ಅಧಿಕ: ಈವರೆಗೆ ನೋಂದಣಿಯಾದವರ ಪೈಕಿ ಶಿರಾ ತಾಲ್ಲೂಕಿನ ಪದವೀಧರರು ಹೆಚ್ಚಿದ್ದು, 1,777 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಕಳೆದ ಬಾರಿ ಚುನಾವಣೆ ಸಮಯದಲ್ಲಿ ಅತಿ ಹೆಚ್ಚು 6,990 ಮತದಾರರನ್ನು ಹೊಂದಿದ್ದ ನಗರ ವಿಧಾನಸಭಾ ಕ್ಷೇತ್ರದಲ್ಲಿ ಇಲ್ಲಿಯ ತನಕ 1,416 ಪದವೀಧರರು ಮಾತ್ರ ಹೆಸರು ನೋಂದಣಿ ಮಾಡಿಸಿಕೊಂಡಿದ್ದಾರೆ.
ಪದವೀಧರರು ಆಯಾ ತಾಲ್ಲೂಕು ಕಚೇರಿಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬಹುದು. ವಿಧಾನಸಭೆ, ಲೋಕಸಭೆ ಚುನಾವಣೆ ಸಮಯದಲ್ಲಿ ಮತಗಟ್ಟೆ ಅಧಿಕಾರಿಗಳು ಜನರ ಬಳಿಗೆ ತೆರಳಿ ಅಗತ್ಯ ದಾಖಲೆ ಪಡೆಯುತ್ತಾರೆ. ಇಲ್ಲಿ ಮತದಾರರೇ ಕಚೇರಿಗೆ ಹೋಗಬೇಕಿದೆ. ನೋಂದಣಿ ಕುಸಿತಕ್ಕೆ ಇದೂ ಒಂದು ಕಾರಣವಾಗಿದೆ. ‘ಆನ್‌ಲೈನ್ ಮುಖಾಂತರ ಹೆಸರು ಸೇರ್ಪಡೆಗೆ ಅವಕಾಶ ಕಲ್ಪಿಸಿದರೆ ಅನುಕೂಲವಾಗುತ್ತದೆ’ ಎಂಬ ಅಭಿಪ್ರಾಯವನ್ನು ಪದವೀಧರರು ವ್ಯಕ್ತಪಡಿಸುತ್ತಿದ್ದಾರೆ.
‘ಪದವಿ ಮುಗಿದ ನಂತರ ಹಲವರು ಉನ್ನತ ವಿದ್ಯಾಭ್ಯಾಸಕ್ಕೆ ಜಿಲ್ಲೆ ಬಿಟ್ಟು ಬೇರೆಡೆಗೆ ಹೋಗಿದ್ದಾರೆ. ಅವರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿಗೆ ಮುಂದಾಗುತ್ತಿಲ್ಲ. ಜಿಲ್ಲೆಯಲ್ಲಿ ನೆಲೆಸಿದವರಿಗೆ ಅರಿವಿನ ಕೊರತೆ ಇದೆ. ಒಮ್ಮೆ ನೋಂದಾಯಿಸಿಕೊಂಡರೆ ಸಾಕು ಎಂಬ ಮನಸ್ಥಿತಿ ಹೊಂದಿರುವವರ ಸಂಖ್ಯೆ ಹೆಚ್ಚಿದೆ. ಅವರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ’ ಎಂದು ಪದವೀಧರ ವೇಣುಗೋಪಾಲ್ ಪ್ರತಿಕ್ರಿಯಿಸಿದರು.
ಮೂರೇ ದಿನದಲ್ಲಿ 4907 ಅರ್ಜಿ
ಅ. 28ರ ವರೆಗೆ 11 ವಿಧಾನಸಭಾ ಕ್ಷೇತ್ರಗಳಿಂದ ಕೇವಲ 6255 ಅರ್ಜಿಗಳು ಸಲ್ಲಿಕೆಯಾಗಿದ್ದವು. ನಂತರ ಮೂರೇ ದಿನದಲ್ಲಿ 4907 ಮಂದಿ ಅರ್ಜಿ ಸಲ್ಲಿಸಿದ್ದಾರೆ. ನ.1 ಮತ್ತು 2ರಂದು ರಜೆ ಇದ್ದ ಕಾರಣ ಅರ್ಜಿ ಸಲ್ಲಿಸಲು ಆಗಿಲ್ಲ. ಇನ್ನು ಕೇವಲ 4 ದಿನ ಮಾತ್ರ ಬಾಕಿ ಉಳಿದಿದೆ. ಈಗ ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸಿದರೆ ತುಂಬಾ ಜನರಿಗೆ ಅನುಕೂಲವಾಗಲಿದೆ ಎಂಬುದು ಪದವೀಧರರ ಒತ್ತಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.