ADVERTISEMENT

ಹಸಿರು ಕ್ಯಾಂಪಸ್ ಅಭಿವೃದ್ಧಿಗೆ ಒತ್ತು

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2019, 12:28 IST
Last Updated 31 ಆಗಸ್ಟ್ 2019, 12:28 IST
ಕಾರ್ಯಕ್ರಮವನ್ನು ಪ್ರೊ.ವೈ.ಎಸ್.ಸಿದ್ದೇಗೌಡ ಉದ್ಘಾಟಿಸಿದರು
ಕಾರ್ಯಕ್ರಮವನ್ನು ಪ್ರೊ.ವೈ.ಎಸ್.ಸಿದ್ದೇಗೌಡ ಉದ್ಘಾಟಿಸಿದರು   

ತುಮಕೂರು: ವಿಶ್ವವಿದ್ಯಾನಿಲಯದ ಹೊಸ ಕ್ಯಾಂಪಸ್‌ಅನ್ನು ಹಸಿರು ಕ್ಯಾಂಪಸ್‌ ಆಗಿ ಅಭಿವೃದ್ಧಿಪಡಿಸಲಾಗುವುದು ಎಂದು ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ತಿಳಿಸಿದರು.

ತುಮಕೂರು ವಿಶ್ವವಿದ್ಯಾನಿಲಯದ ಪರಿಸರ ವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಸಮಾಜಕಾರ್ಯ ವಿಭಾಗಗಳು ವಿ ಪ್ಲಾಂಟ್ ಇಂಡಿಯಾ ಸಹಯೋಗದಲ್ಲಿ ಸ್ಥಾಪಿಸಿದ ಬೀಜ ಬ್ಯಾಂಕ್ ಹಾಗೂ ನಿಮ್ಮ ಕ್ಯಾಂಪಸ್ ತಿಳಿಯಿರಿ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ಜಾಗತಿಕ ತಾಪಮಾನದ ಸಮಸ್ಯೆ ಈಗಾಗಲೇ ವಿವಿಧ ದೇಶಗಳನ್ನು ತಟ್ಟಿದೆ. ಸ್ಥಳೀಯ ಮಟ್ಟದಲ್ಲೂ ಅದರ ಬಿಸಿ ಜನರ ಆತಂಕಕ್ಕೆ ಕಾರಣವಾಗಿದೆ. ಇದನ್ನು ಸಮರ್ಥವಾಗಿ ಎದುರಿಸಲು ನಾವು ಸಿದ್ಧರಾಗಬೇಕಿದೆ ಎಂದರು.

ADVERTISEMENT

ಬಿದರಕಟ್ಟೆಯ ಹೊಸ ಕ್ಯಾಂಪಸ್‌ನಲ್ಲಿ ಹಸಿರು ವಾತಾವರಣ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳಲ್ಲಿ ಈ ಕುರಿತು ಹೆಚ್ಚಿನ ಅರಿವು ಮೂಡಿಸಲಾಗುವುದು ಎಂದು ಹೇಳಿದರು.

ವಿ ಪ್ಲಾಂಟ್ ಇಂಡಿಯಾ ಸಂಸ್ಥೆ ಸಂಸ್ಥಾಪಕ ಡಾ.ಸಂತೋಷ್ ಜಾರ್ಜ್, ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹುಣಸೆ, ಮಾವು, ನೇರಳೆ, ಹಲಸು, ಬಾದಾಮಿ ಮುಂತಾದ ಹಣ್ಣಿನ ಬೀಜಗಳನ್ನು ವಿತರಿಸಿದರು. ಸಾಧ್ಯವಾದಷ್ಟು ಮಟ್ಟಿಗೆ ಅವುಗಳನ್ನು ಬಿತ್ತಿ ಬೆಳೆಸುವ ಜವಾಬ್ದಾರಿವಹಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪರಿಸರ ವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಾಯಕ ಪ್ರಾಧ್ಯಾಪಕ ರಾಜಾನಾಯಕ್, ವಿದ್ಯಾರ್ಥಿಗಳು ಮನೆಮನೆಗಳಲ್ಲೂ ಬೀಜದುಂಡೆಗಳನ್ನು ತಯಾರಿಸಿ ಪ್ರಸಾರ ಮಾಡಲು ಹೆಚ್ಚಿನ ಆಸಕ್ತಿ ತೋರಬೇಕು ಎಂದರು.

ಕುಲಸಚಿವ ಪ್ರೊ.ಕೆ.ಎನ್. ಗಂಗಾನಾಯಕ್, ಸಿಂಡಿಕೇಟ್ ಸದಸ್ಯ ಆರ್.ಕೆ.ಶ್ರೀನಿವಾಸ್, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಜೆ. ಸುರೇಶ್, ಸಮಾಜಕಾರ್ಯ ವಿಭಾಗದ ಪ್ರಾಧ್ಯಾಪಕ ಕೆ.ಜಿ.ಪರಶುರಾಮ, ವಿವಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಶಾಲಿನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.