ADVERTISEMENT

ಗ್ರಾ.ಪಂ. ಕಾರ್ಯವೈಖರಿ ವಿರುದ್ಧ ಆಕ್ರೋಶ

ನಾಗರಿಕ ಹಿತರಕ್ಷಣೆ ವೇದಿಕೆ ನೇತೃತ್ವದಡಿ ಸದಸ್ಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2023, 4:46 IST
Last Updated 31 ಜನವರಿ 2023, 4:46 IST
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಗ್ರಾಮ ಪಂಚಾಯಿತಿ ಅವ್ಯವಸ್ಥೆ ಖಂಡಿಸಿ ನಾಗರಿಕ ಹಿತರಕ್ಷಣೆ ವೇದಿಕೆಯ ಪದಾಧಿಕಾರಿಗಳು ಸದಸ್ಯ ಎಚ್.ಎನ್. ನಟರಾಜು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಗ್ರಾಮ ಪಂಚಾಯಿತಿ ಅವ್ಯವಸ್ಥೆ ಖಂಡಿಸಿ ನಾಗರಿಕ ಹಿತರಕ್ಷಣೆ ವೇದಿಕೆಯ ಪದಾಧಿಕಾರಿಗಳು ಸದಸ್ಯ ಎಚ್.ಎನ್. ನಟರಾಜು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು   

ಕುಣಿಗಲ್: ತಾಲ್ಲೂಕಿನ ಹುಲಿಯೂರುದುರ್ಗ ಗ್ರಾಮ ಪಂಚಾಯಿತಿ ಅಧ್ಯಕ್ಷ, ಕಾರ್ಯದರ್ಶಿ ಮತ್ತು ನಾಡ ಕಚೇರಿಯ ಅಸಮರ್ಪಕ ಕಾರ್ಯವೈಖರಿ ಖಂಡಿಸಿ ಗ್ರಾಮ ಪಂಚಾಯಿತಿ ಸದಸ್ಯರು ಸೋಮವಾರ ಪಂಚಾಯಿತಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯು ನಾಗರಿಕ ಹಿತ ರಕ್ಷಣೆ ವೇದಿಕೆ ಆಶ್ರಯದಲ್ಲಿ ನಡೆಯಿತು. ನೇತೃತ್ವವಹಿಸಿದ್ದ ಪಂಚಾಯಿತಿ ಸದಸ್ಯ ಎಚ್.ಎನ್. ನಟರಾಜು, ನರೇಗಾ ಮತ್ತು 15ನೇ ಹಣಕಾಸು ಯೋಜನೆ ಬಗ್ಗೆ ಜನಪ್ರತಿನಿಧಿಗಳಿಗೆ ಮಾಹಿತಿ ನೀಡದೆ ಹಣ ದುರುಪಯೋಗ ಮಾಡಿಕೊಂಡಿದ್ದಾರೆ. ಇ–ಸ್ವತ್ತು ಮಾಡುವಲ್ಲಿ ಸಂಪೂರ್ಣ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು
ದೂರಿದರು.

ಸಾರ್ವಜನಿಕ ಸ್ಮಶಾನಕ್ಕೆ ಒತ್ತಾಯಿಸಿ ಪ್ರತಿಭಟನೆ ಮಾಡಿದ್ದರೂ ಪ್ರಯೋಜನವಾಗಿಲ್ಲ. ಹೋಬಳಿ ಕೇಂದ್ರದಲ್ಲಿ ಪ್ರಯಾಣಿಕರ ತಂಗುದಾಣವಿಲ್ಲ. ಸಾರ್ವಜನಿಕ ಶೌಚಾಲಯ ಅವ್ಯವಸ್ಥೆಯ ಆಗರವಾಗಿದೆ. ಸಂಬಂಧಪಟ್ಟವರು ಗಮನ ಹರಿಸುತ್ತಿಲ್ಲ. ಕಸ ವಿಲೇವಾರಿ ಘಟಕ ಪ್ರಾರಂಭವಾಗಿಲ್ಲ. ಕಸ ಸಂಗ್ರಹಣೆಗಾಗಿ ಸಾರ್ವಜನಿಕರಿಗೆ ನೀಡಲು ತಂದಿರುವ ಬಕೆಟ್‌ಗಳು ಪಂಚಾಯಿತಿಯ ಮೂಲೆ ಸೇರಿವೆ ಎಂದು ಟೀಕಿಸಿದರು.

ADVERTISEMENT

ನಾಡ ಕಚೇರಿಯು ಮಧ್ಯವರ್ತಿಗಳ ವ್ಯಾವಹಾರಿಕ ತಾಣವಾಗಿದೆ. ಜೀವಂತವಿರುವ ವ್ಯಕ್ತಿಯ ಮರಣ ಪ್ರಮಾಣ ಪತ್ರ ನೀಡಿ ಖಾತೆ ಮಾಡಿದ್ದಾರೆ ಎಂದು ದೂರಿದರು.

ಪಂಚಾಯಿತಿ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದು ಎರಡು ವರ್ಷಕ್ಕೆ ಕೇವಲ ನಾಲ್ಕು ಸಾಮಾನ್ಯ ಸಭೆ ನಡೆಸಲಾಗಿದೆ. ಸಕಾಲದಲ್ಲಿ ಸಾಮಾನ್ಯ ಸಭೆ ನಡೆಸಿ ಸಾರ್ವಜನಿಕ ಸಮಸ್ಯೆಗೆ ಸ್ಪಂದಿಸಲು ಅವಕಾಶ ನೀಡುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ
ಎಂದರು.

ಪಂಚಾಯಿತಿ ಸದಸ್ಯರಾದ ಬಸವರಾಜು, ಗಂಗಮ್ಮ, ಷಣ್ಮುಖಾನಂದ, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪುಟ್ಟರಾಜು, ಮುಖಂಡರಾದ ಪೂರ್ಣಚಂದ್ರ, ಸಿದ್ದಲಿಂಗ, ವೆಂಕಟೇಶ್, ದೊಡ್ಡಮಾದಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.