ಗುಬ್ಬಿ: ‘ಕೆಲಸ ಆಗಬೇಕಾದಾಗ ಕಾಲು ಹಿಡಿದು ಕೆಲಸವಾದ ನಂತರ ಕಾಲು ಎಳೆಯುವ ಬುದ್ಧಿ ಇರುವ ರಾಜಕಾರಣಿಗಳಿಂದ ಯಾವುದೇ ಪಾಠ ಕಲಿಯುವ ಅಗತ್ಯವಿಲ್ಲ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಶಾಂತಲಾ ರಾಜಣ್ಣ ಕಿಡಿಕಾರಿದರು.
ಅವರು ಗುಬ್ಬಿ ತಾಲ್ಲೂಕಿನ ಚೇಳೂರಿನಲ್ಲಿ ಏರ್ಪಡಿಸಿದ್ದ ಕೆಎನ್‌ಆರ್ ಜನ್ಮ ದಿನಾಚರಣೆ ಹಾಗೂ ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮ ಕುರಿತು ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
‘ಹಿಂದುಳಿದ ವರ್ಗಗಳ ಮತಗಳಿಂದ ಆಯ್ಕೆಯಾಗಿದ್ದೇನೆ ಎಂದು ಹೇಳುವ ಗುಬ್ಬಿ ಶಾಸಕ ಧೈರ್ಯವಿದ್ದರೆ ಕೆ.ಎನ್ ರಾಜಣ್ಣ ಅವರ ಕುಟುಂಬದಿಂದ ಯಾವುದೇ ಸಹಾಯ ಪಡೆದಿಲ್ಲ ಎಂದು ಹೇಳಲಿ ನೋಡೋಣ’ ಎಂದು ಸವಾಲು ಹಾಕಿದರು.
‘ಅಧಿಕಾರಕ್ಕಾಗಿ ಯಾರ ಬಳಿಗೂ ನಾವು ಹೋಗಿಲ್ಲ. ಬೇರೆಯವರ ಮನೆ ಬಾಗಿಲಿಗೆ ಹೋಗುವಂತಹ ಪರಿಸ್ಥಿತಿ ಬಂದಿಲ್ಲ. ಆದರೆ ಸಹಾಯ ಪಡೆದವರು ನಿಂದಿಸಿ ಮಾತನಾಡುವುದು ಮನಸ್ಸಿಗೆ ನೋವನ್ನುಂಟು ಮಾಡಿದೆ’ ಎಂದು ಶಾಸಕ ಎಸ್.ಆರ್ ಶ್ರೀನಿವಾಸ್ ವಿರುದ್ಧ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದರು.
‘ನಮ್ಮಿಂದ ಸಹಾಯ ಪಡೆದವರು ಅದಕ್ಕೆ ಪ್ರತಿಯಾಗಿ ಸಹಾಯ ಮಾಡಿದ್ದಾರೆ. ಅದರಲ್ಲಿ ವಿಶೇಷ ಏನೂ ಇಲ್ಲ. ತುಮಕೂರಿನಲ್ಲಿ ಆಯೋಜಿಸಿರುವ ಕಾರ್ಯಕ್ರಮಕ್ಕೆ ತಾಲ್ಲೂಕಿನ ವಾಲ್ಮೀಕಿ ಸಮುದಾಯದವರು ಭಾಗವಹಿಸದಂತೆ ಮಾಡಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಇದರ ಹಿಂದೆ ಯಾರ ಕೈವಾಡ ಇದೆ ಎಂಬುದು ತಿಳಿದಿದೆ.
ಸಮುದಾಯ ಅದಾವುದಕ್ಕೂ ಕಿವಿಗೊಡದೆ ಎಲ್ಲರೂ ಒಗ್ಗಟ್ಟಿನಿಂದ ಇರಬೇಕು’ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ರಾಜೇಂದ್ರ, ಸಮುದಾಯದ ಮುಖಂಡರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.