ADVERTISEMENT

ಸರ್ವಧರ್ಮ ನೆಲೆ ಬೀಡು ಗುಬ್ಬಿ: ಎಚ್.ಕೆ ನರಸಿಂಹಮೂರ್ತಿ

ಕನ್ನಡ ಸಾಹಿತ್ಯ ಪರಿಷತ್ತಿನ ನಡೆ -ಯುವಜನರ ಕಡೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 6:12 IST
Last Updated 2 ಸೆಪ್ಟೆಂಬರ್ 2025, 6:12 IST
ಗುಬ್ಬಿಯಲ್ಲಿ ‘ಕಸಾಪ ನಡೆ ಯುವ ಜನರ ಕಡೆ’ ಕಾರ್ಯಕ್ರಮ ಆಯೋಜಿಸಲಾಗಿತ್ತು 
ಗುಬ್ಬಿಯಲ್ಲಿ ‘ಕಸಾಪ ನಡೆ ಯುವ ಜನರ ಕಡೆ’ ಕಾರ್ಯಕ್ರಮ ಆಯೋಜಿಸಲಾಗಿತ್ತು    

ಗುಬ್ಬಿ: ಗುಬ್ಬಿ ಸಾಹಿತ್ಯ, ಸಾಂಸ್ಕೃತಿಕ ಹಾಗೂ ಭೌಗೋಳಿಕವಾಗಿ ತನ್ನದೇ ಐತಿಹಾಸಿಕ ಹಿನ್ನೆಲೆ ಹೊಂದಿದೆ ಎಂದು ನಿವೃತ್ತ ಡಿಡಿಪಿಯು ಎಚ್.ಕೆ ನರಸಿಂಹಮೂರ್ತಿ ಅಭಿಪ್ರಾಯಪಟ್ಟರು.

‌‌ಸೋಮವಾರ ಪಟ್ಟಣದಲ್ಲಿ ‘ಕನ್ನಡ ಸಾಹಿತ್ಯ ಪರಿಷತ್ತಿನ ನಡೆ -ಯುವಜನರ ಕಡೆ’ ಕಾರ್ಯಕ್ರಮದಲ್ಲಿ ಮಾತನಾಡಿದರು. ಇತಿಹಾಸಕಾರ ಲಾರ್ಡ್ ಬುಕನಾನ್ ಗ್ರಂಥದಲ್ಲಿ ಗುಬ್ಬಿ ಇತಿಹಾಸದ ಬಗ್ಗೆ ಮಾಹಿತಿ ಕಾಣಬಹುದಾಗಿದೆ. ಸರ್ವ ಧರ್ಮಗಳ ಆಶ್ರಯ ತಾಣವಾಗಿರುವ ಗುಬ್ಬಿಯು ಎಲ್ಲ ಕ್ಷೇತ್ರಗಳಲ್ಲಿಯೂ ತನ್ನದೇ ಮಹತ್ವ ಪಡೆದು ವಿಶ್ವ ಪ್ರಸಿದ್ಧಿಯಾಗಿದೆ ಎಂದು ಹೇಳಿದರು.

ಸಾಹಿತ್ಯ ಕ್ಷೇತ್ರದಲ್ಲಿ ಮಲ್ಲಣಾರ್ಯರಿಂದ ಇಲ್ಲಿವರೆಗೆ ಅನೇಕ ಹೆಸರಾಂತ ಸಾಹಿತಿಗಳು ಅಮೂಲ್ಯ ಕೊಡುಗೆ ನೀಡಿದ್ದಾರೆ. ನಾಟಕ ರತ್ನ ಗುಬ್ಬಿ ವೀರಣ್ಣ ರಂಗಭೂಮಿಗೆ ನೀಡಿರುವ ಕೊಡುಗೆಯಿಂದಾಗಿ ಗುಬ್ಬಿ ಹೆಸರು ವಿಶ್ವಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ ಎಂದು ತಿಳಿಸಿದರು.

ADVERTISEMENT

ಈ ಊರಿನ ಶರಣರು, ಸಾಧು ಸಂತರು, ಮಹನೀಯರು, ಸ್ವಾತಂತ್ರ್ಯ ಹೋರಾಟಗಾರರು, ಕಲಾವಿದರು ತಮ್ಮದೇ ಕೊಡುಗೆ ನೀಡಿದ್ದಾರೆ. ಇತಿಹಾಸ ಪ್ರಸಿದ್ಧ ಗುಬ್ಬಿ ಆರಾಧ್ಯ ದೈವ ಗೋಸಲ ಚನ್ನಬಸವೇಶ್ವರಸ್ವಾಮಿ, ಚಿದಂಬರ ಆಶ್ರಮ, ಚರ್ಚ್‌, ದರ್ಗಾ, ಜೈನ ಬಸದಿಗಳು ಸರ್ವಧರ್ಮಗಳ ನೆಲೆವೀಡಿಗೆ ಸಾಕ್ಷಿಗಳಾಗಿವೆ ಎಂದು ಹೇಳಿದರು.

ನಾಟಕರತ್ನ ಗುಬ್ಬಿ ವೀರಣ್ಣ, ಚಿತ್ರ ಸಾಹಿತಿ ಚಿ.ಉದಯ ಶಂಕರ್, ಸಾಲುಮರದ ತಿಮ್ಮಕ್ಕ, ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಧರ್ಮ ಪ್ರವರ್ತಕ ತೋಟದಪ್ಪ ತಾಲ್ಲೂಕಿಗೆ ಮುಕುಟ ಪ್ರಾಯವಾಗಿದ್ದಾರೆ ಎಂದು ತಿಳಿಸಿದರು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಸಿ.ಯತೀಶ್ ಮಾತನಾಡಿ, ಸ್ಥಳೀಯ ಇತಿಹಾಸ ಹಾಗೂ ಸಾಹಿತ್ಯ ಪರಂಪರೆಯನ್ನು ಯುವಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ ಕಸಾಪ ಹೊಸ ಕಾರ್ಯಕ್ರಮ ರೂಪಿಸುತ್ತಿದೆ. ಸ್ಥಳೀಯ ಪರಂಪರೆ ಉಳಿಸಿ ಬೆಳೆಸುವಲ್ಲಿ ಯುವಕರು ಪಾತ್ರ ಮಹತ್ತರವಾಗಿದೆ ಎಂದು ಹೇಳಿದರು. ನಾಡಿನ ನೆಲ,ಜಲ, ಭಾಷೆ, ಕಲೆ,ಸಾಹಿತ್ಯ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.

ಪ್ರಾಂಶುಪಾಲ ಚಂದ್ರಶೇಖರ್ ಮಾತನಾಡಿ, ಅಮೂಲ್ಯವಾದ ಐತಿಹಾಸಿಕ ಪರಂಪರೆ ಹೊಂದಿರುವ ಗುಬ್ಬಿ ತಾಲ್ಲೂಕು ಇಡೀ ರಾಜ್ಯದಲ್ಲಿಯೇ ಹೆಚ್ಚು ಮನ್ನಣೆ ಗಳಿಸಿದೆ. ಯುವಜನರು ನಾಡಿನ ಸಂರಕ್ಷಣೆ ವಿಚಾರದಲ್ಲಿ ಒಗ್ಗಟ್ಟು ಪ್ರದರ್ಶಿಸಿ, ಪರಂಪರೆ ಉಳಿವಿಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಉಪನ್ಯಾಸಕರಾದ ರಮೇಶ್, ಗೀತಾ, ಶ್ರೀನಿವಾಸಮೂರ್ತಿ, ಲತಾ, ಮಲ್ಲಿಕಾರ್ಜುನ್, ವಸುಧ ಶೋಭಾ ಬಾಯಿ, ಫಾರ್ಹನ ಖಾನಂ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.