ADVERTISEMENT

ಗುಬ್ಬಿ ಪಟ್ಟಣ ಪಂಚಾಯಿತಿ ಆಯವ್ಯಯ ಮಂಡನೆ: ಕಟ್ಟುನಿಟ್ಟಿನ ವಸೂಲಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2024, 5:04 IST
Last Updated 2 ಮಾರ್ಚ್ 2024, 5:04 IST
ಗುಬ್ಬಿ ಪಟ್ಟಣ ಪಂಚಾಯಿತಿಯಲ್ಲಿ ಬಜೆಟ್‌ ಮಂಡಿಸಲಾಯಿತು
ಗುಬ್ಬಿ ಪಟ್ಟಣ ಪಂಚಾಯಿತಿಯಲ್ಲಿ ಬಜೆಟ್‌ ಮಂಡಿಸಲಾಯಿತು    

ಗುಬ್ಬಿ: ಪಟ್ಟಣ ಪಂಚಾಯಿತಿಯ 2024-25ನೇ ಸಾಲಿನ ಆಯವ್ಯಯವನ್ನು ತಹಶೀಲ್ದಾರ್ ಆರತಿ ಬಿ.ಆರತಿ ಶುಕ್ರವಾರ ಮಂಡಿಸಿದರು.

ಬಜೆಟ್ ಕುರಿತು ಚರ್ಚಿಸಿದ ಸದಸ್ಯರು ಪಟ್ಟಣದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಅವುಗಳ ನಿಯಂತ್ರಣಕ್ಕೆ ನಿಗದಿಪಡಿಸಿರುವ ಅನುದಾನ ಹೆಚ್ಚಿಸಿಕೊಂಡು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಬಜೆಟ್‌ನಲ್ಲಿ ಮಂಡಿಸಿರುವ ಎಲ್ಲ ಯೋಜನೆ ಅನುಷ್ಠಾನಗೊಳಿಸಲು ಅಗತ್ಯ ಅನುದಾನದ ಜೊತೆಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಎಲ್ಲ ವಿಧದ ತೆರಿಗೆ ವಸೂಲಿ ಮಾಡಿ ಪಟ್ಟಣ ಪಂಚಾಯಿತಿ ಆದಾಯ ಹೆಚ್ಚಿಸಿಕೊಳ್ಳಬೇಕು ಎಂದರು.

ADVERTISEMENT

ಮಾರನಕಟ್ಟೆಯಲ್ಲಿನ ಹಂದಿಜೋಗಿ ಸಮುದಾಯಕ್ಕೆ ಮಳೆಗಾಲಕ್ಕೆ ಮುನ್ನ ಹಕ್ಕುಪತ್ರ ವಿತರಿಸಲು ಕ್ರಮ ವಹಿಸುವಂತೆ ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಎಸ್.ಆರ್. ಶ್ರೀನಿವಾಸ್, ಈಗಾಗಲೇ ತಾಲ್ಲೂಕಿನ ಸಾತೇನಹಳ್ಳಿ ಗೇಟ್‌ನಲ್ಲಿ ನಿವೇಶನ ಗುರುತಿಸಲಾಗಿದೆ. ಶೀಘ್ರ ಹಕ್ಕುಪತ್ರ ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಬುಗುಡನಹಳ್ಳಿ ಕೆರೆಗೆ ಹೇಮಾವತಿ ನಾಲೆಯಲ್ಲಿ ನೀರು ಹರಿಸಿದಾಗ ಪಟ್ಟಣದ ಕೆರೆಗೂ ನೀರು ಬಿಟ್ಟುಕೊಳ್ಳಲು ಸಾಧ್ಯವಾಗುವಂತೆ ಸಚಿವರ ಜೊತೆ ಚರ್ಚಿಸಿದ್ದೇನೆ. ಯಾವುದೇ ಸಮಸ್ಯೆಗಳಿದ್ದರೂ ಗಮನಕ್ಕೆ ತಂದಲ್ಲಿ ತುರ್ತುಕ್ರಮ ಕೈಗೊಳ್ಳಲಾಗುವುದು ಎಂದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುಳಾದೇವಿ, ಸದಸ್ಯರಾದ ಮೋಹನ್, ಕುಮಾರ್, ರೇಣುಕಾ ಪ್ರಸಾದ್, ಮೊಹಮ್ಮದ್ ಸಾಧಿಕ್, ಶಿವಕುಮಾರ್, ಶಶಿಧರ್, ಮಂಗಳಮ್ಮ, ಶ್ವೇತಾ, ರಾಜೇಶ್ವರಿ, ಮಹಾಲಕ್ಷ್ಮಿ ಹಾಗೂ ಸಿಬ್ಬಂದಿ ಹಾಜರಿದ್ದರು.

ಹೇರೂರು ನೀರು: ಎರಡು ತಿಂಗಳಿಗೆ ಸೀಮಿತ
ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಹೇರೂರು ಕೆರೆಯಲ್ಲಿನ ನೀರು ಇನ್ನು ಎರಡು ತಿಂಗಳು ಮಾತ್ರ ಲಭ್ಯವಿರುವುದರಿಂದ ಪಟ್ಟಣದಲ್ಲಿ ಖಾಲಿ ಇರುವ ಕೊಳವೆ ಬಾವಿಗಳಿಗೆ ಮೋಟರ್ ಅಳವಡಿಸಿ ನೀರು ಸರಬರಾಜು ಮಾಡಬೇಕು. ಕೊಳವೆ ಬಾವಿಗಳು ಇಲ್ಲದಿರುವೆಡೆ ಹೇಮಾವತಿ ನೀರು ಸರಬರಾಜು ಮಾಡಲು ಕ್ರಮ ಕೈಗೊಂಡರೆ ಮೂರು ತಿಂಗಳವರೆಗೂ ನೀರು ಬಳಸಿಕೊಳ್ಳಲು ಸಾಧ್ಯ ಎಂದು ಸದಸ್ಯರು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.