ADVERTISEMENT

ತುಮಕೂರು ಜಿಲ್ಲೆಯಲ್ಲಿ ಅರ್ಧದಷ್ಟು ಸಂಖ್ಯೆಯ ಬಸ್‌ ರಸ್ತೆಗಿಳಿದಿಲ್ಲ

ಕೆ.ಜೆ.ಮರಿಯಪ್ಪ
Published 23 ಸೆಪ್ಟೆಂಬರ್ 2021, 3:31 IST
Last Updated 23 ಸೆಪ್ಟೆಂಬರ್ 2021, 3:31 IST
ತುಮಕೂರು ಖಾಸಗಿ ಬಸ್ ನಿಲ್ದಾಣ
ತುಮಕೂರು ಖಾಸಗಿ ಬಸ್ ನಿಲ್ದಾಣ   

ತುಮಕೂರು: ಕೋವಿಡ್ ಮೊದಲ ಹಾಗೂ ಎರಡನೇ ಅಲೆ ಮುಗಿದಿದ್ದರೂ ಜನಜೀವನ ಸಹಜಸ್ಥಿತಿಗೆ ಮರಳಿಲ್ಲ. ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ಕೊಂಡಿಯಾಗಿರುವ ಖಾಸಗಿ ಬಸ್‌ಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ರಸ್ತೆಗಿಳಿದಿಲ್ಲ.

ಬಸ್‌ ಸಂಚಾರಕ್ಕೆ ಪಡೆದಿದ್ದ ಪರ್ಮಿಟ್‌ಗಳನ್ನು ಕೋವಿಡ್ ಮೊದಲ ಅಲೆಯ ಸಮಯದಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿಗೆ ವಾಪಸ್ ಮಾಡಿದ್ದ ಸಾಕಷ್ಟು ಸಂಖ್ಯೆಯ ಬಸ್ ಮಾಲೀಕರು, ಈಗಲೂ ಬಸ್ ಓಡಿಸಲು ಹಿಂದೆಮುಂದೆ ನೋಡುತ್ತಿದ್ದಾರೆ. ಜಿಲ್ಲೆಯಲ್ಲಿ 434 ಬಸ್‌ಗಳು ಪರ್ಮಿಟ್ ಹೊಂದಿದ್ದು, ಕೋವಿಡ್ ಸಮಯದಲ್ಲಿ ಆರ್‌ಟಿಒಗೆ ವಾಪಸ್ ಮಾಡಿದ್ದರು. ಪ್ರಸ್ತುತ ಅದರಲ್ಲಿಅರ್ಧದಷ್ಟು ಬಸ್‌ಗಳಿಗೆ ತೆರಿಗೆ ಪಾವತಿಸಿ ಸಂಚಾರ ಆರಂಭಿಸಿದ್ದು, ಇನ್ನೂ ಸಾಕಷ್ಟು ಸಂಖ್ಯೆಯ ಬಸ್‌ಗಳು ನಿಂತಲ್ಲೇ ನಿಂತಿವೆ.

ತುಮಕೂರು– ಬೆಂಗಳೂರು ಹಾಗೂ ಶಿರಾ, ತಿಪಟೂರು ಸೇರಿದಂತೆ ಹೆದ್ದಾರಿ ಹಾದು ಹೋಗಿರುವ ಕಡೆಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರವಿದೆ. ಉಳಿದ ಪ್ರದೇಶಗಳಿಗೆ ಖಾಸಗಿ ಬಸ್‌ಗಳೇ ಆಸರೆಯಾಗಿವೆ. ಕುಣಿಗಲ್, ಮಧುಗಿರಿ, ಪಾವಗಡ ಮಾರ್ಗಗಳಲ್ಲಿ ಐದತ್ತು ನಿಮಿಷಕ್ಕೆ ಒಂದು ಬಸ್ ಸಂಚರಿಸುತಿತ್ತು. ತುಮಕೂರಿನಿಂದ ಚೇಳೂರು, ಊರ್ಡಿಗೆರೆ, ಕೋಳಾಲ, ಕೆ.ಜಿ.ಟೆಂಪಲ್, ತೋವಿನಕೆರೆ, ಇತರ ಮಾರ್ಗಗಳಲ್ಲಿ ಖಾಸಗಿ ಬಸ್‌ಗಳಷ್ಟೇ ಸಂಚರಿಸುತ್ತವೆ. ವಿವಿಧ ತಾಲ್ಲೂಕು ಕೇಂದ್ರಗಳಿಂದ ಹಳ್ಳಿಗಳಿಗೆ ಸಂಪರ್ಕದ ಕೊಂಡಿಯಾಗಿವೆ.

ADVERTISEMENT

ಸಂಚಾರ ವಿರಳ: ಪ್ರಸ್ತುತ ಬಸ್‌ಗಳ ಸಂಚಾರ ಆರಂಭವಾಗಿದ್ದರೂ ಹಿಂದಿನಷ್ಟು ಸಂಖ್ಯೆಯಲ್ಲಿ ಓಡಾಡುತ್ತಿಲ್ಲ. ಬಸ್‌ಗಳಿಗೆ ಗಂಟೆಗಟ್ಟಲೆ ಕಾಯಬೇಕಿದೆ. ಕೆಲವು ಕಡೆಗಳಲ್ಲಿ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ವೇಳೆಗೆ ನಿರ್ದಿಷ್ಟ ಸಮಯದಲ್ಲಿ ಬೆರಳೆಣಿಕೆಯಷ್ಟು ಸಂಚರಿಸುತ್ತಿವೆ. ಇದರಿಂದಾಗಿ ಜನರಿಗೆ ಸಕಾಲಕ್ಕೆ ಬೇಕಾದ ಜಾಗಕ್ಕೆ ತೆರಳು ಸಾಧ್ಯವಾಗುತ್ತಿಲ್ಲ ಎಂದು ಊರ್ಡಿಗೆರೆಯ ಮಂಜುನಾಥ್ ಹೇಳುತ್ತಾರೆ.

ತೆರಿಗೆ ಕಟ್ಟಿ ಪರ್ಮಿಟ್ ಪಡೆದು ಬಸ್‌ಗಳನ್ನು ಓಡಿಸಲು ಮಾಲೀಕರಿಗೂ ಕೋವಿಡ್ ಮೂರನೇ ಅಲೆಯ ಭಯ ಕಾಡುತ್ತಿದೆ. ಮೂರು ತಿಂಗಳಿಗೆ ಒಮ್ಮೆ ಒಂದು ಬಸ್‌ಗೆ ₹49 ಸಾವಿರ ತೆರಿಗೆ ಪಾವತಿಸಬೇಕಿದೆ. ತೆರಿಗೆ ಕಟ್ಟಿ ಪರ್ಮಿಟ್ ಪಡೆದುಕೊಂಡು ಬಸ್ ಓಡಿಸಲು ಆರಂಭಿಸಿದ ಸಮಯದಲ್ಲಿ ಮತ್ತೆ ಕೊರೊಮಾ ಸೋಂಕು ಹೆಚ್ಚಳವಾಗಿ, ಲಾಕ್‌ಡೌನ್‌ನಂತಹ ಕಠಿಣ ನಿಯಮಗಳು ಜಾರಿಯಾದರೆ, ಸೋಂಕಿನ ಭಯಕ್ಕೆ ಜನರ ಓಡಾಟ ಕಡಿಮೆಯಾದರೆ ಮತ್ತೆ ನಷ್ಟ ಮಾಡಿಕೊಳ್ಳಬೇಕಾಗುತ್ತದೆ ಎಂಬ ಆತಂಕದಿಂದ ರಸ್ತೆಗೆ ಇಳಿಸಲು ಸಾಕಷ್ಟು ಮಾಲೀಕರು ಹಿಂಜರಿಯುತ್ತಿದ್ದಾರೆ.

ಹೆಚ್ಚಿದ ವೆಚ್ಚ: ತಿಂಗಳುಗಟ್ಟಲೆ ನಿಂತಿರುವ ಬಸ್‌ಗಳು ದುರಸ್ತಿಗೆ ಬಂದಿವೆ. ಬ್ಯಾಟರಿ ಹಾಳಾಗಿದ್ದು, ಎಂಜಿನ್ ಆಯಿಲ್ ಬದಲಿಸಿ ರಿಪೇರಿ ಕೆಲಸ ಮಾಡಿಸಬೇಕಾಗುತ್ತದೆ. ಒಂದು ಬಸ್‌ಗೆ ಒಂದು ಲಕ್ಷದವರೆಗೂ ಖರ್ಚು ಬರುತ್ತದೆ. ಮುಂಗಡ ತೆರಿಗೆ ಪಾವತಿಸಿ,ದುರಸ್ತಿ ಮಾಡಿಸಿ ಮತ್ತೆ ನಿಲ್ಲಿಸುವಂತಾದರೆ ಸಾಲ ಮೈಮೇಲೆ ಬರುತ್ತದೆ ಎಂಬ ಆತಂಕ ಮಾಲೀಕರನ್ನು ಕಾಡುತ್ತಿದೆ.

ಈಗ ಗೌರಿ, ಗಣೇಶ ಹಬ್ಬ ಮುಗಿದಿದ್ದು, ಪಿತೃಪಕ್ಷದ ಮಾಸ ಆರಂಭವಾಗಿದೆ. ಶುಭ ಕಾರ್ಯಗಳು, ಹಬ್ಬ, ಜಾತ್ರೆಗಳು ಇರುವುದಿಲ್ಲ. ಈ ಸಮಯದಲ್ಲಿ ಜನರ ಸಂಚಾರವೂ ಕಡಿಮೆ ಇರುತ್ತದೆ. ಇದರಿಂದ ಪ್ರಯಾಣಿಕರ ಕೊರತೆ ಎದುರಾದರೆ ನಷ್ಟವಾಗುತ್ತದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ನೋಡಿಕೊಂಡು ಬಸ್ ಸಂಚಾರ ಆರಂಭಿಸಲಾಗುವುದು ಎಂದು ಬಸ್ ಮಾಲೀಕರು ಹೇಳುತ್ತಾರೆ.

ಉದ್ಯೋಗ ನಷ್ಟ: ಪ್ರತಿ ಬಸ್‌ಗೆ ಚಾಲಕ, ನಿರ್ವಾಹಕ, ಇಬ್ಬರು ಕ್ಲೀನರ್‌ಗಳು ಇರುತ್ತಾರೆ. ಜತೆಗೆ ಪ್ರಮುಖ ಸ್ಥಳಗಳಲ್ಲಿ ಹತ್ತಾರು ಏಜೆಂಟರು ಕೆಲಸ ಮಾಡುತ್ತಾರೆ. ಹತ್ತಾರು ಗ್ಯಾರೇಜ್‌ಗಳು ಇವರನ್ನೇ ನಂಬಿಕೊಂಡಿವೆ. ನೇರ ಹಾಗೂ ಪರೋಕ್ಷವಾಗಿ ಸಾವಿರಾರು ಜನರಿಗೆ ಉದ್ಯೋಗ ನೀಡಿದೆ.

ಬಸ್‌ಗಳು ಸಂಚಾರ ನಿಲ್ಲಿಸಿದ ಸಮಯದಲ್ಲಿ ಸಾಕಷ್ಟು ಜನರು ಕೆಲಸವಿಲ್ಲದೆ ಪರದಾಡಿದರು. ಚಾಲಕರು ಟ್ರ್ಯಾಕ್ಟರ್, ಲಾರಿ, ಟೆಂಪೊ ಸೇರಿದಂತೆ ಸಿಕ್ಕ ಕಡೆಗಳಲ್ಲಿ ದುಡಿದರು. ಕೆಲಸ ಸಿಗದವರು ಕೂಲಿಯನ್ನೂ ಮಾಡಿದರು. ನಿರ್ವಾಹಕರಿಗೆ ಬೇರೆ ಉದ್ಯೋಗ ಗೊತ್ತಿಲ್ಲದೆ ಕೂಲಿಗೆ ಇಳಿಯಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.