ADVERTISEMENT

ಕೌಶಲ ಕೇಂದ್ರ ಕಟ್ಟಲು ಚಾಲನೆ

ಇನ್ಫೋಸಿಸ್‌ ಪ್ರತಿಷ್ಠಾನದಿಂದ ಬೆಳಗುಂಬದಲ್ಲಿ ತಲೆಎತ್ತಲಿದೆ ಅಂಗವಿಕಲರ ಕೌಶಲ ಕೇಂದ್ರ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 11:11 IST
Last Updated 13 ಮಾರ್ಚ್ 2020, 11:11 IST
ಅಂಗವಿಕಲರ ಕೌಶಲ ಕೇಂದ್ರ ನಿರ್ಮಾಣಕ್ಕೆ ಸ್ವಾಮಿ ವೀರೇಶಾನಂದ ಸರಸ್ವತಿ, ಡಿ.ಸಿ.ಗೌರಿಶಂಕರ್‌ ಅವರು ಶಂಕುಸ್ಥಾಪನೆ ನೆರವೇರಿಸಿದರು
ಅಂಗವಿಕಲರ ಕೌಶಲ ಕೇಂದ್ರ ನಿರ್ಮಾಣಕ್ಕೆ ಸ್ವಾಮಿ ವೀರೇಶಾನಂದ ಸರಸ್ವತಿ, ಡಿ.ಸಿ.ಗೌರಿಶಂಕರ್‌ ಅವರು ಶಂಕುಸ್ಥಾಪನೆ ನೆರವೇರಿಸಿದರು   

ತುಮಕೂರು: ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆಯ ಶತಮಾನೋತ್ಸವ ವರ್ಷಾಚರಣೆ ನೆನಪಿನಲ್ಲಿ ಇನ್ಫೋಸಿಸ್‌ ಪ್ರತಿಷ್ಠಾನದ ಸಹಯೋಗದಲ್ಲಿ ಬೆಳಗುಂಬದಲ್ಲಿ ನಿರ್ಮಿಸಲು ಯೋಜಿಸಿರುವ ‘ಅಂಗವಿಕಲರ ಕೌಶಲ ಕೇಂದ್ರ’ಕ್ಕೆ ಗುರುವಾರ ಶಂಕುಸ್ಥಾಪನೆ ನೆರವೇರಿಸಲಾಯಿತು.

ಈ ವೇಳೆ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತಿ ಮಾತನಾಡುತ್ತ, ಸೇವಾ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಅಸಹಾಯಕರು, ಅಶಕ್ತರಿಗೆ ನೆರವಿನ ಹಸ್ತ ಚಾಚಬೇಕು ಎಂದು ಸಲಹೆ ನೀಡಿದರು.

ರೋಗಗಳು ಇಲ್ಲವೆಂದ ಮಾತ್ರಕ್ಕೆ ಸಮಾಜ ಆರೋಗ್ಯವಾಗಿದೆ ಎಂದರ್ಥವಲ್ಲ. ನಮ್ಮ ನಡುವೆ ಆರೋಗ್ಯವಂತ ಮನಸ್ಥಿತಿಗಳೂ ಇರಬೇಕು. ಯುದ್ಧಗಳು ಆರಂಭವಾಗುವುದು ಬುದ್ಧಿಯಿಂದ, ನಂತರ ಅವು ಶಸ್ತ್ರಗಳ ರೂಪದಲ್ಲಿ ಕಾರ್ಯರೂಪಕ್ಕೆ ಬರುತ್ತವೆ. ಇಂದು ಯುದ್ಧದ ಬದಲಿಗೆ ಶಾಂತಿ ಬೇಕಿದೆ ಎಂದರು.

ADVERTISEMENT

ಕಾನೂನು, ಸಂಸದೀಯ ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ, ಸರ್ಕಾರ ಹೇಗೆ ಬಡವರ ಪರ ಕೆಲಸ ನಿರ್ವಹಿಸುತ್ತದೆಯೋ, ಅದೇ ರೀತಿ ಇನ್ಫೋಸಿಸ್‌ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ. ಕೋಟಿಗಳ ವೆಚ್ಚದಲ್ಲಿ ತರಬೇತಿ ಕೇಂದ್ರ ಸ್ಥಾಪಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಇನ್ಫೋಸಿಸ್ ಪ್ರತಿಷ್ಠಾನದ ಉಪಾಧ್ಯಕ್ಷ ರಾಮದಾಸ್ ಕಾಮತ್, ಅಂಗವಿಕಲರು ವಿದ್ಯಾಭ್ಯಾಸ ನಂತರ ಏನು ಮಾಡಬೇಕು ಎಂಬ ಗೊಂದಲದಲ್ಲಿ ಇರುತ್ತಾರೆ. ಅವರು ಅಸಹಾಯಕರಾಗಿ ಭಿಕ್ಷೆ ಬೇಡುವಂತಾಗಬಾರದು. ಅವರೂ ಸ್ವಾವಲಂಬಿಯಾಗಲು ಈ ಕೇಂದ್ರ ನೆರವಾಗಲಿ ಎಂದು ಆಶಿಸಿದರು.

ಸಿದ್ಧಗಂಗಾ ಮಠದ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ಪತ್ರಕರ್ತ ಎಸ್.ನಾಗಣ್ಣ, ಶಾಸಕರಾದ ಡಿ.ಸಿ.ಗೌರಿಶಂಕರ್, ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಕೆ.ರಾಕೇಶ್‍ಕುಮಾರ್, ಜಿ.ಪಂ. ಸಿಇಒ ಶುಭಾ ಕಲ್ಯಾಣ್, ಎಸ್ಪಿ ಕೆ.ವಂಶಿಕೃಷ್ಣ, ಬೆಳಗುಂಬ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳಗೌರಮ್ಮ, ಎಚ್.ಜಿ.ಚಂದ್ರಶೇಖರ್, ಜಿ.ವಿ.ವಾಸುದೇವ್, ಸಾಗರನಹಳ್ಳಿ ಪ್ರಭು, ಕೆ. ಚಂದ್ರಣ್ಣ, ಬಿ.ಆರ್.ವೇಣುಗೋಪಾಲಕೃಷ್ಣ, ಸುರೇಂದ್ರ ಎ. ಷಾ, ಕೆ.ಜಿ.ಶಿವಕುಮಾರ್, ಟಿ.ಆರ್.ಮಲ್ಲೇಶಯ್ಯ, ಸುಭಾಷಿಣಿ ಆರ್ ಕುಮಾರ್, ಮುಸ್ತಾಕ್ ಅಹಮದ್, ಜಿ.ವೆಂಕಟೇಶ್, ಉಮೇಶ್ ಇದ್ದರು.

***

ಏನೆಲ್ಲಾ ಇರಲಿದೆ ಕೌಶಲ ಕೇಂದ್ರದಲ್ಲಿ?

ಬೆಳಗುಂಬದ ವಾಕ್‌ ಮತ್ತು ಶ್ರವಣ ದೋಷವುಳ್ಳ ಮಕ್ಕಳ ವಸತಿ ಶಾಲೆ ಆವರಣದಲ್ಲಿ ಈ ಕೇಂದ್ರ ಕಟ್ಟಲಾಗುತ್ತಿದೆ.

ಮೂರು ಅಂತಸ್ತಿನಲ್ಲಿ ಕಟ್ಟಲಾಗುವ ಈ ಕಟ್ಟಡದಲ್ಲಿ 10 ವಿಧದ ಕೌಶಲಗಳನ್ನು ಕಲಿಸಲು ಯೋಜಿಸಲಾಗಿದೆ. ಅದರಲ್ಲಿ ಕಂಪ್ಯೂಟರ್‌ ಸಾಫ್ಟ್‌ವೇರ್‌ ಮತ್ತು ಹಾರ್ಡ್‌ವೇರ್‌ ಕೋರ್ಸ್‌ಗಳು, ಗ್ರಾಫಿಕ್‌ ಡಿಸೈನ್‌, ಮೊಬೈಲ್‌ ರಿಪೇರಿ, ಟೈಲರಿಂಗ್‌, ಅನಿಮೇಷನ್‌, ಎಲೆಕ್ಟ್ರಾನಿಕ್‌ ಉಪಕರಣಗಳ ರಿಪೇರಿ ಸೇರಿವೆ.

ತರಬೇತಿಗಾಗಿ ಬರುವ ಅಂಗವಿಕಲರಿಗೆ ವಸತಿನಿಲಯದ ಸೌಲಭ್ಯವೂ ಇರಲಿದೆ.

*

ಅಂಕಿ–ಅಂಶ

₹ 10 ಕೋಟಿ

ಕೌಶಲ ಕೇಂದ್ರ ನಿರ್ಮಾಣಕ್ಕೆ ನಿಗದಿ ಪಡಿಸಲಾದ ಮೊತ್ತ

2 ಎಕರೆ

ಕೇಂದ್ರ ನಿರ್ಮಾಣಕ್ಕೆ ಮೀಸಲಿಟ್ಟ ಜಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.