ADVERTISEMENT

ತುಮಕೂರು: ರಾಗಿ ಮಾರಾಟಕ್ಕೆ ಮುಗಿಬಿದ್ದ ರೈತರು

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 4:04 IST
Last Updated 5 ಮಾರ್ಚ್ 2021, 4:04 IST
ಕುಣಿಗಲ್ ರಾಗಿ ಖರೀದಿ ಕೇಂದ್ರ
ಕುಣಿಗಲ್ ರಾಗಿ ಖರೀದಿ ಕೇಂದ್ರ   

ತುಮಕೂರು: ಬೆಂಬಲ ಬೆಲೆಯಲ್ಲಿ ರಾಗಿ ಮಾರಾಟ ಮಾಡಲು ರೈತರು ಒಮ್ಮೆಲೆ ಮುಂದಾಗಿರುವುದು ಹಲವು ಗೊಂದಲ, ಸಮಸ್ಯೆಗಳಿಗೆ ದಾರಿಮಾಡಿಕೊಟ್ಟಿದೆ.

ಖರೀದಿ ಕೇಂದ್ರಗಳಿಗೆ ಹೆಚ್ಚಿನ ಸಂಖ್ಯೆಯ ರೈತರು ಒಮ್ಮೆಲೆ ರಾಗಿ ತರಲಾರಂಭಿಸಿರುವುದು ಒತ್ತಡ ಹೆಚ್ಚಾಗಲು ಕಾರಣವಾಗಿದೆ. ಕುಣಿಗಲ್, ಹುಳಿಯಾರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ ಕೇಂದ್ರಗಳಲ್ಲಿ ಹೆಚ್ಚಿನ ಒತ್ತಡ ಉಂಟಾಗಿದೆ. ಈ ನಾಲ್ಕು ಕೇಂದ್ರಗಳಲ್ಲಿ ರಾತ್ರಿಯೆಲ್ಲಾ ರೈತರು ಕಾದುಕುಳಿತು ರಾಗಿ ಮಾರಾಟ ಮಾಡುತ್ತಿರುವುದು ಕಂಡುಬರುತ್ತಿದೆ.

ಮಾರ್ಚ್ 15ರ ಒಳಗೆ ಮಾರಾಟ ಮಾಡಬೇಕು ಎಂಬ ಒತ್ತಡದಿಂದಾಗಿ ಹೆಚ್ಚಿನ ಸಂಖ್ಯೆಯ ರೈತರು ಖರೀದಿ ಕೇಂದ್ರಗಳಿಗೆ ಬರುತ್ತಿದ್ದಾರೆ. ಮಾರ್ಚ್ ಕೊನೆಯವರೆಗೂ ಮಾರಾಟಕ್ಕೆ ಅವಕಾಶ ಸಿಗಲಿದೆ. ಮಾರ್ಚ್ 15ರ ಒಳಗೆ ನೋಂದಣಿ ಮಾಡಿಸಬೇಕು. ನಂತರವೂ ಖರೀದಿ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಸರ್ಕಾರದಿಂದ ಅಧಿಕೃತ ಆದೇಶ ಹೊರ ಬೀಳದಿರುವುದರಿಂದ ರೈತರು ಆತಂಕಗೊಂಡು ಒಮ್ಮೆಲೆ ಖರೀದಿ ಕೇಂದ್ರಗಳಿಗೆ ಬರುತ್ತಿದ್ದಾರೆ. ಹಾಗಾಗಿ ಒತ್ತಡ ಜಾಸ್ತಿಯಾಗಿದೆ.

ADVERTISEMENT

ಸಾಮಾನ್ಯವಾಗಿ ಡಿಸೆಂಬರ್ ಕೊನೆ, ಜನವರಿ ಆರಂಭದಲ್ಲಿ ರಾಗಿ ಒಕ್ಕಣೆ ಪೂರ್ಣಗೊಳ್ಳುತ್ತದೆ. ಜನವರಿ ಆರಂಭ ಅಥವಾ ಮಧ್ಯ ಭಾಗದಲ್ಲಿ ಖರೀದಿ ಕೇಂದ್ರ ಆರಂಭಿಸಿದ್ದರೆ ಇಷ್ಟೊಂದು ಸಮಸ್ಯೆ, ಒತ್ತಡ ಆಗುತ್ತಿರಲಿಲ್ಲ. ಸರ್ಕಾರ ಈ ಬಾರಿ ಖರೀದಿ ಕೇಂದ್ರ ತೆರೆಯಲು ತಡಮಾಡಿದ್ದು ಸಮಸ್ಯೆ ದುಪ್ಪಟ್ಟು ಮಾಡಿದೆ. ಫೆ. 14ರಿಂದ ಖರೀದಿ ಆರಂಭವಾಗಿದ್ದು, ಇನ್ನು ಹತ್ತು ದಿನಗಳಷ್ಟೇ ಕಾಲಾವಕಾಶ ಇದೆ. ಮಾರ್ಚ್ ಅಂತ್ಯದವರೆಗೂ ಖರೀದಿ ಮುಂದುವರಿಯುವುದೊ, ಇಲ್ಲವೆ ಮಾರ್ಚ್ 15ಕ್ಕೆ ಮುಗಿಯುವುದೊ ಎಂಬ ಆತಂಕದಿಂದಾಗಿ ಸಾಧ್ಯವಾದಷ್ಟು ಬೇಗ ಮಾರಾಟ ಮಾಡಲು ರೈತರು ರಾಗಿ ಹೊತ್ತು ತರುತ್ತಿದ್ದಾರೆ.

ನೋಂದಣಿ: ಪಾವಗಡ ಹೊರತುಪಡಿಸಿ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಹೆಚ್ಚುವರಿಯಾಗಿ ಹುಳಿಯಾರಿನಲ್ಲೂ ಆರಂಭಿಸಲಾಗಿದೆ. ಸುಮಾರು 13 ಸಾವಿರ ರೈತರು ಒಟ್ಟು 3.21 ಲಕ್ಷ ಕ್ವಿಂಟಲ್ ರಾಗಿ ಮಾರಾಟ ಮಾಡುವುದಾಗಿ ಹೆಸರು ನೋಂದಣಿ ಮಾಡಿಸಿದ್ದಾರೆ. ಈವರೆಗೆ 14 ಸಾವಿರ ಕ್ವಿಂಟಲ್ ಖರೀದಿಯಷ್ಟೇ ಆಗಿದೆ. ಇನ್ನೂ ಸಾಕಷ್ಟು ಪ್ರಮಾಣದಲ್ಲಿ ಖರೀದಿ ಮಾಡಬೇಕಿದ್ದು, ರಾಗಿ ಖರೀದಿ ಕೇಂದ್ರ ಹಾಗೂ ಅಧಿಕಾರಿಗಳ ಮೇಲೆ ಒತ್ತಡ ಹೆಚ್ಚಾಗಿದೆ.

‘ಮಾರ್ಚ್ ಕೊನೆಯವರೆಗೂ ಖರೀದಿಸಲು ಅವಕಾಶ ಸಿಗಲಿದೆ. ರೈತರುಆತಂಕಪಡುವ ಅಗತ್ಯವಿಲ್ಲ’ ಎಂದು ಖರೀದಿ ಕೇಂದ್ರದ ಉಸ್ತುವಾರಿ ಹೊತ್ತಿರುವ ಜಿಲ್ಲಾ ವ್ಯವಸ್ಥಾಪಕ ಚನ್ನಾನಾಯಕ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.