ತುಮಕೂರು: ತಾಲ್ಲೂಕಿನ ಗೂಳೂರು ಹೋಬಳಿಯ ಇತಿಹಾಸ ಪ್ರಸಿದ್ಧ ಹೆತ್ತೇನಹಳ್ಳಿ ಆದಿಶಕ್ತಿ ಮಾರಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಮುಂಜಾನೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ನೆರವೇರಿತು.
ಸೋಮವಾರ ಇಡೀ ರಾತ್ರಿ ವಿವಿಧ ಕಾರ್ಯಕ್ರಮಗಳು ನೆರವೇರಿದವು. ಪ್ರತಿ ವರ್ಷದಂತೆ, ಸಂಪ್ರದಾಯ ಬದ್ಧವಾಗಿ ಮಂಗಳವಾರ ಬೆಳಗ್ಗೆ 4 ಗಂಟೆಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ವಿವಿಧ ಬಗೆಯ ಪುಷ್ಪಗಳಿಂದ ವರ್ಣರಂಜಿತವಾಗಿ ಅಲಂಕರಿಸಿದ್ದ ರಥದಲ್ಲಿ ದೇವಿಯನ್ನು ಕೂರಿಸುತ್ತಿದ್ದಂತೆ ನೆರೆದಿದ್ದ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು. ಭಕ್ತರು ರಥವನ್ನು ಎಳೆದು ಮುನ್ನಡೆಸಿದರು. ರಥಕ್ಕೆ ಹೂವು, ದವನ, ಬಾಳೆ ಹಣ್ಣು ಎಸೆದು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಮಾಡಿಕೊಂಡಿದ್ದ ಹರಕೆ ತೀರಿಸಿದರು.
ಹೆತ್ತೇನಹಳ್ಳಿ, ಕೈದಾಳ, ಗೂಳೂರು, ಕಂಭತ್ತನಹಳ್ಳಿ, ರಂಗಯ್ಯನಪಾಳ್ಯ, ಚಿಕ್ಕಸಾರಂಗಿ, ನರುಗನಹಳ್ಳಿ, ಮಾಯಣ್ಣಗೌಡನ ಪಾಳ್ಯ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಸಹಸ್ರಾರು ಭಕ್ತರು ಭಾಗವಹಿಸಿದ್ದರು. ಸೋಮವಾರ ಇಡೀ ದಿನ ಭಕ್ತರು ಉಪವಾಸ ವ್ರತ ಆಚರಿಸಿ, ಮುಂಜಾನೆ ಅಗ್ನಿಕೊಂಡ ಹಾಯ್ದು ಅಮ್ಮನವರಿಗೆ ಹರಕೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.
ಹೆಣ್ಣು ಮಕ್ಕಳು ಅಮ್ಮನವರಿಗೆ ಬಾಯಿ ಬೀಗದ ಹರಕೆ ತೀರಿಸುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು, ಈ ಸಲವೂ ನೆರವೇರಿಸಿದರು. ಕಂಭತ್ತನಹಳ್ಳಿಯ ವೀರ ಮಕ್ಕಳು ಒಂದು ವಾರದಿಂದ ಉಪವಾಸವಿದ್ದು, ನಸುಕಿನಲ್ಲಿ ಅಗ್ನಿಕೊಂಡ ಹಾಯುವ ಮೂಲಕ ಹರಕೆ ತೀರಿಸಿದ್ದು ವಿಶೇಷವಾಗಿತ್ತು.
ಉಪವಿಭಾಗಾಧಿಕಾರಿ ಗೌರವಕುಮಾರ್ ಶೆಟ್ಟಿ, ತಹಶೀಲ್ದಾರ್ ಸಿದ್ದೇಶ್ ರಥೋತ್ಸವಕ್ಕೆ ಚಾಲನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.