ADVERTISEMENT

ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆ: ಹೆದ್ದಾರಿ ತಡೆದ ರೈತರು ವಶಕ್ಕೆ

ರಸ್ತೆ ತಡೆಗೆ ಸಿಗದ ಅವಕಾಶ; ರೈತರು– ಪೊಲೀಸರ ನಡುವೆ ಜಟಾಪಟಿ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2020, 3:36 IST
Last Updated 6 ನವೆಂಬರ್ 2020, 3:36 IST
ರೈತರು– ಪೊಲೀಸರ ನಡುವೆ ಜಗ್ಗಾಟ
ರೈತರು– ಪೊಲೀಸರ ನಡುವೆ ಜಗ್ಗಾಟ   

ತುಮಕೂರು: ಕೇಂದ್ರ, ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಮಸೂದೆಗಳನ್ನು ವಾಪಸ್ ಪಡೆಯಬೇಕು, ಕೃಷಿ ಉತ್ಪನ್ನಗಳ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆನೇತೃತ್ವದಲ್ಲಿ ಹೆದ್ದಾರಿ ತಡೆಗೆ ಮುಂದಾದ ರೈತರನ್ನು ಪೊಲೀಸರುವಶಕ್ಕೆ ಪಡೆದರು.

ಹೆದ್ದಾರಿ ತಡೆ ನಡೆಸಲು ಕ್ಯಾತ್ಸಂದ್ರದಿಂದ ಜಾಸ್ ಟೋಲ್‌ಗೇಟ್‌ಗೆ ಗುರುವಾರ ಬೆಳಿಗ್ಗೆ ಮೆರವಣಿಗೆಯಲ್ಲಿ ಹೊರಟ ರೈತರನ್ನು ತಡೆದ ಪೊಲೀಸರು, ನಂತರ ಬಂಧಿಸಿದರು. ರೈತ ಮುಖಂಡರನ್ನು ಬಂಧಿಸಲು ಮುಂದಾಗುತ್ತಿದ್ದಂತೆ ಸಾಕಷ್ಟು ತಿಕ್ಕಾಟಗಳು ನಡೆದವು.

ಬಂಧನಕ್ಕೆ ಒಳಗಾಗದ ರೈತರನ್ನು ಪೊಲೀಸರು ಬಲವಂತವಾಗಿ ಎತ್ತಿಕೊಂಡುಬಂದು ವಾಹನಕ್ಕೆ ಹತ್ತಿಸಿದರು. ಈ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಘೋಷಣೆಗಳು ಮೊಳಗಿದವು. ರೈತ ಸಂಘದ ಮುಖಂಡರು ಹಾಗೂ ಪೊಲೀಸರ ನಡುವೆ ಕೆಲ ಸಮಯ ವಾಗ್ವಾದಗಳು ನಡೆದವು. ಪೊಲೀಸರ ಕ್ರಮವನ್ನು ಖಂಡಿಸಿ, ರಸ್ತೆಯಲ್ಲೇ ಧರಣಿ ನಡೆಸಲು ಮುಂದಾದರು.

ADVERTISEMENT

ವಶಕ್ಕೆ ಪಡೆದ ರೈತರನ್ನು ಜಿಲ್ಲಾ ಸಶಸ್ತ್ರ ಮೀಸಲುಪಡೆಯ ಆವರಣಕ್ಕೆ ಕರೆತಂದರು. ಅಲ್ಲಿಯೂ ರೈತರು ಪ್ರತಿಭಟನೆ ಮುಂದುವರಿಸಿ, ಸರ್ಕಾರದ ಧೋರಣೆ ಖಂಡಿಸಿದರು.

ಕ್ಯಾತ್ಸಂದ್ರ ಬಳಿ ಸಮಾವೇಶಗೊಂಡಿದ್ದ ರೈತರನ್ನು ಉದ್ದೇಶಿಸಿ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆನಂದ ಪಟೇಲ್ ಮಾತನಾಡಿ, ‘ರೈತ ವಿರೋಧಿ ಮಸೂದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲಾಗಿದೆ. ಭೂ ಸುಧಾರಣೆ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಜಾರಿಗೆ ಬಂದಿವೆ. ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಲಾಗುತ್ತಿದೆ. ರೈತರು, ದೇಶಕ್ಕೆ ಮಾರಕವಾದ ಕಾಯ್ದೆಗಳನ್ನು ಜಾರಿಮಾಡಲಾಗುತ್ತಿದೆ’ ಎಂದು ಟೀಕಿಸಿದರು.

ಪ್ರತಿಭಟನೆಗೆ ಅವಕಾಶ ನೀಡದ ಪೊಲೀಸರ ಕ್ರಮವನ್ನು ಖಂಡಿಸಿದರು. ಈ ಹಿಂದೆ ರಾಜ್ಯ ಬಂದ್‌ಗೆ ಕರೆ ನೀಡಿದ್ದ ಸಮಯದಲ್ಲೂ ಬೈಕ್ ರ‍್ಯಾಲಿಗೆ ಅವಕಾಶ ನೀಡಲಿಲ್ಲ. ರಾಜಕಾರಣಿಯೊಬ್ಬರ ಮನೆ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ ಸಮಯದಲ್ಲಿ ಯಾವುದೇ ಅನುಮತಿ ಇಲ್ಲದೆ ಬೈಕ್ ರ್‍ಯಾಲಿಗೆ ಅವಕಾಶ ನೀಡಿದ್ದರು. ಆದರೆ ರೈತರು ತಮ್ಮ ಸಮಸ್ಯೆ ಹೇಳಿಕೊಳ್ಳಲು ಪೊಲೀಸರು ಅವಕಾಶ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆಂಕೆರೆ ಸತೀಶ್, ಜಿಲ್ಲಾ ಕಾರ್ಯಾಧ್ಯಕ್ಷ ಧನಂಜಯ ಆರಾಧ್ಯ, ಮುಖಂಡರಾದ ರುದ್ರೇಶಗೌಡ, ಹಳೆ ಸಂಪಿಗೆ ಕೀರ್ತಿ, ಚಿದಾನಂದಮೂರ್ತಿ, ಅನಿಲ್ ಕುಮಾರ್, ಕುದುರೆಕುಂಟೆ ಲಕ್ಕಣ್ಣ, ತಾಳೆಕೆರೆ ನಾಗೇಂದ್ರ,
ಲಂಕೇನಹಳ್ಳಿ ಕಾಂತರಾಜು ನೇತೃತ್ವ ವಹಿಸಿದ್ದರು. ನೂರಾರು ರೈತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.