ADVERTISEMENT

ಹಿಂದಿ ದಿವಸ್‌ ಆಚರಣೆ ರದ್ದು ಮಾಡಿ

ಕನ್ನಡಪರ ವಿವಿಧ ಸಂಘಟನೆಗಳು, ಬರಹಗಾರರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2019, 13:18 IST
Last Updated 15 ಸೆಪ್ಟೆಂಬರ್ 2019, 13:18 IST
ಹಿಂದಿ ದಿವಸ್‌ ಆಚರಣೆ ವಿರೋಧಿಸಿ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು
ಹಿಂದಿ ದಿವಸ್‌ ಆಚರಣೆ ವಿರೋಧಿಸಿ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು   

ತುಮಕೂರು: ‘ಹಿಂದಿ ದಿವಸ್‌’ ಆಚರಣೆ ವಿರೋಧಿಸಿ ಕನ್ನಡಪರ ವಿವಿಧ ಸಂಘಟನೆಗಳು, ಬರಹಗಾರರು ಪುರಭವನ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಕೇಂದ್ರ ಸರ್ಕಾರ ಸೆ.14ರಂದು ಹಿಂದಿ ದಿವಸ್ ಆಚರಿಸುತ್ತಿದೆ. ನಮ್ಮ ದೇಶದ ಒಕ್ಕೂಟ ವ್ಯವಸ್ಥೆ ಬಹುಧರ್ಮ, ಬಹುಭಾಷೆ, ಬಹುಸಂಸ್ಕೃತಿಯಿಂದ ರೂಪಿತವಾಗಿದೆ. ಸಂವಿಧಾನದ ಪ್ರಕಾರ ಎಲ್ಲ ಭಾಷೆಗಳಿಗೂ ಸಮಾನ ಘನತೆ-ಗೌರವ ಇದೆ. ದೇಶದ 22 ಭಾಷೆಗಳನ್ನು ಸಂವಿಧಾನವು ಆಡಳಿತಾತ್ಮಕವಾಗಿ ಅಧಿಕೃತ ಭಾಷೆಗಳಾಗಿ ಅಂಗೀಕರಿಸಿದೆ. ಹಿಂದಿಯೂ ಸೇರಿದಂತೆ, ಯಾವುದೇ ಒಂದು ಭಾಷೆ ರಾಷ್ಟ್ರಭಾಷೆಯಲ್ಲ. 22 ಭಾಷೆಗಳೂ ರಾಷ್ಟ್ರಭಾಷೆಗಳೇ. ಹೀಗಿರುವಾಗ ಒಂದು ಭಾಷೆಯನ್ನು ಇಡೀ ದೇಶದ ಸಂಪರ್ಕ ಭಾಷೆಯಾಗಿ ಬಿಂಬಿಸುವುದು ಪ್ರಜಾಸತ್ತಾತ್ಮಕ ಅಲ್ಲ. ಇತರ ಭಾಷೆಗಳ ಮೇಲೆ ಆಕ್ರಮಣ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಈಗಾಗಲೇ ಫೆಬ್ರವರಿ 21ರಂದು ಮಾತೃಭಾಷಾ ದಿವಸ ಆಚರಿಸಲಾಗುತ್ತಿದೆ. ಹಾಗಾಗಿ ಹಿಂದಿ ದಿವಸದ ಅವಶ್ಯಕತೆ ಇಲ್ಲ. ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ಸಂಪರ್ಕ ಭಾಷೆಯಾಗಿ ಉಪಭಾಷೆಗಳು ಬಳಕೆಯಲ್ಲಿವೆ. ಆದರೂ ಅವುಗಳನ್ನು ಹಿಂದಿ ರಾಜ್ಯ ಎಂದು ಹೇಳಲಾಗುತ್ತಿದೆ. ರಾಷ್ಟ್ರಭಾಷೆಯ ಉಲ್ಲೇಖ ಸಂವಿಧಾನದಲ್ಲಿ ಇಲ್ಲ. ದಬ್ಬಾಳಿಕೆಗೆ ಒಳಗಾಗಿ ರಾಜ್ಯದ ಅನೇಕ ಶಾಲಾ–ಕಾಲೇಜುಗಳಲ್ಲಿ ಹಿಂದಿ ದಿವಸ ಆಚರಿಸಲಾಗುತ್ತಿದೆ. ಇದು ಒಕ್ಕೂಟ ವ್ಯವಸ್ಥೆಗೆ ಮಾರಕ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

ಸಂಪರ್ಕ ಭಾಷೆ, ಮಾತೃ ಭಾಷೆ, ಪ್ರಾದೇಶಿಕ ಭಾಷೆ, ರಾಜ್ಯ ಭಾಷೆ, ರಾಷ್ಟ್ರ ಭಾಷೆ ಎಂದು ವಿಭಜಿಸುತ್ತಾ ಭಾಷಾ ಬಾಂಧವ್ಯವನ್ನು ಹಾಳು ಮಾಡಬಾರದು. ಬೇಕಾದರೆ ಆಯಾ ರಾಜ್ಯಗಳು ಭಾಷಾ ದಿವಸ ಆಚರಿಸಿಕೊಳ್ಳಲು ಬಿಡಬೇಕು. ಹಿಂದಿ ಹೇರಿಕೆಯನ್ನು ನಾವು ಖಂಡಿಸುತ್ತೇವೆ ಎಂದರು.

ಲೇಖಕ ಕವಿತಾಕೃಷ್ಣ, ಕನ್ನಡದಲ್ಲಿ ವ್ಯಾಸಂಗ ಮಾಡಿದವರಿಗೆ ಉದ್ಯೋಗ ಸಿಗಬೇಕು. ಹಿಂದಿಯನ್ನು ಬಲವಂತವಾಗಿ ಹೇರಿ ಕನ್ನಡದ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಪ್ರಯತ್ನ ಖಂಡನೀಯ ಎಂದು ಹರಿಹಾಯ್ದರು.

ಕಸಾಪ ಕೋಶಾಧ್ಯಕ್ಷ ಬಿ.ಮರುಳಯ್ಯ, ಕನ್ನಡ ಸಾಹಿತ್ಯ ಪರಿಷತ್ತಿನ ನಗರ ಘಟಕದ ಅಧ್ಯಕ್ಷ ಅನ್ನಪೂರ್ಣ ವೆಂಕಟನಂಜಪ್ಪ, ಮಣ್ಣೆ ರಾಜು, ಸಿ.ಎ.ಇಂದಿರಾ, ಜಿಲ್ಲಾ ಚುಟುಕ ಸಾಹಿತ್ಯ ಪರಿಷತ್ತಿನ ಲಕ್ಷ್ಮೀಕಾಂತರಾಜೇ ಅರಸು, ಗುಬ್ಬಿ ಸಂಘದ ಪ್ರಕಾಶ್ ಕೆ.ನಾಡಿಗ್, ನಿವೃತ್ತ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಪುಟ್ಟನರಸಯ್ಯ, ಕೆಎಸ್‍ಆರ್‌ಟಿಸಿ ಕನ್ನಡ ಬಳಗದ ಹನುಮಂತರಾಯ, ಅಭ್ಯುದಯ ಸೇವಾ ಸಂಘದ ಲಲಿತಾ ಮಲ್ಲಪ್ಪ, ಮಮತಾ ರವಿಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.