ADVERTISEMENT

ಸತ್ಯಶೋಧನೆ; ಪತ್ರಾಗಾರದಲ್ಲಿ ದಾಖಲೆ ಲಭ್ಯ

ತುಮಕೂರು ಜಿಲ್ಲೆಯ ಇತಿಹಾಸ ಪುನರ್‌ರಚನೆಯಲ್ಲಿ ಚಾರಿತ್ರಿಕ ದಾಖಲೆಗಳ ಪಾತ್ರ ಕುರಿತ ವಿಚಾರಣೆ ಸಂಕಿರಣ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2019, 12:32 IST
Last Updated 20 ಸೆಪ್ಟೆಂಬರ್ 2019, 12:32 IST
ವಿಚಾರ ಸಂಕಿರಣವನ್ನು ಅಂಬುಜಾಕ್ಷಿ ಉದ್ಘಾಟಿಸಿದರು
ವಿಚಾರ ಸಂಕಿರಣವನ್ನು ಅಂಬುಜಾಕ್ಷಿ ಉದ್ಘಾಟಿಸಿದರು   

ತುಮಕೂರು: ಇತಿಹಾಸವೆಂದರೆ ಸತ್ಯಶೋಧನೆ. ಈ ಸತ್ಯಶೋಧನೆ ಹಾಗೂ ಸಂಶೋಧನೆ ನಡೆಸುವವರಿಗೆ ಬೇಕಾಗುವ ಇತಿಹಾಸದ ದಾಖಲೆಗಳು ರಾಜ್ಯ ಪತ್ರಾಗಾರ ಇಲಾಖೆಯಲ್ಲಿ ಲಭ್ಯ ಇವೆ. ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಕರ್ನಾಟಕ ಪತ್ರಾಗಾರ ಇಲಾಖೆಯ ನಿರ್ದೇಶಕಿ ಡಾ.ಎಸ್. ಅಂಬುಜಾಕ್ಷಿ ತಿಳಿಸಿದರು.

ರಾಜ್ಯ ಪತ್ರಾಗಾರ ಇಲಾಖೆ, ಸಿದ್ಧಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಿಳಾ ಪದವಿ ಕಾಲೇಜಿನ ಇತಿಹಾಸ ವಿಭಾಗದ ಸಹಯೋಗದಲ್ಲಿ ‘ತುಮಕೂರು ಜಿಲ್ಲೆಯ ಇತಿಹಾಸ ಪುನರ್‌ರಚನೆಯಲ್ಲಿ ಚಾರಿತ್ರಿಕ ದಾಖಲೆಗಳ ಪಾತ್ರ’ ಕುರಿತು ಹಮ್ಮಿಕೊಂಡಿರುವ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಹೆಚ್ಚಿನ ಜನರಿಗೆ ರಾಜ್ಯ ಪತ್ರಾಗಾರ ಇಲಾಖೆಯ ಪರಿಚಯವಿಲ್ಲ. ಈ ಇಲಾಖೆಯು ಐತಿಹಾಸಿಕ ದಾಖಲೆಗಳನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸಿ, ವಿದ್ಯಾರ್ಥಿಗಳು ಹಾಗೂ ಸಂಶೋಧನೆ ಮಾಡುವವರಿಗೆ ದಾಖಲೆಗಳನ್ನು ಒದಗಿಸುವ ಒಂದು ಸರ್ಕಾರದ ಇಲಾಖೆ ಆಗಿದೆ ಎಂದು ತಿಳಿಸಿದರು.

ADVERTISEMENT

ಇತಿಹಾಸಕ್ಕೂ ಪತ್ರಾಗಾರ ಇಲಾಖೆಗೂ ಸಂಬಂಧವಿದೆ. ಸುಮಾರು 1799ರಿಂದ ಇತಿಹಾಸದ ದಾಖಲೆಗಳು ಪತ್ರಾಗಾರ ಇಲಾಖೆಯಲ್ಲಿ ಲಭ್ಯ ಇವೆ. ಸುಮಾರು ದಾಖಲೆಗಳನ್ನು ಗಣಕೀಕರಣ ಮಾಡಲಾಗಿದೆ. ಸತ್ಯಶೋಧಕರು, ಸಂಶೋಧಕರು ಈ ದಾಖಲೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎಂದು ತಿಳಿಸಿದರು.

ಸಿದ್ಧಗಂಗಾ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಟಿ.ಕೆ.ನಂಜುಂಡಪ್ಪ ಮಾತನಾಡಿ, ಪ್ರತಿ ವಸ್ತುವಿಷಯಕ್ಕೂ ಇತಿಹಾಸ ಇದೆ. ಅದನ್ನು ನಾವು ಅರಿಯಬೇಕು. ಈ ವಿಚಾರ ಸಂಕಿರಣದ ವಿಷಯ ಸಮಯೋಚಿತವಾಗಿದೆ ಎಂದರು.

ಸಿದ್ಧಗಂಗಾ ಪದವಿ ಕಾಲೇಜಿನ ಸಂಯೋಜಕ ಡಾ.ಡಿ.ಎನ್.ಯೋಗೀಶ್ವರಪ್ಪ, ಪತ್ರಾಗಾರ ಇಲಾಖೆಯೊಂದಿಗಿನ ತಮ್ಮ ಅನುಭವಗಳನ್ನು ಹಂಚಿಕೊಂಡರು. ಇನ್ನೂ ಹಲವು ಐತಿಹಾಸಿಕ ದಾಖಲೆಗಳು ಖಾಸಗಿಯವರ ಬಳಿ ಇವೆ. ಇಲಾಖೆಯವರು ಅವರ ಮನವೊಲಿಸಿ ದಾಖಲೆಗಳನ್ನು ಪಡೆದು ಇತಿಹಾಸ ಉಳಿಸಬೇಕು ಎಂದು ತಿಳಿಸಿದರು.

ಪ್ರಾಂಶುಪಾಲ ಡಾ. ಕೆ.ಸಿ. ಜಯಸ್ವಾಮಿ, ಇತಿಹಾಸ ಪ್ರಜ್ಞೆಯು ದೇಶಪ್ರೇಮ ಬೆಳೆಸಿಕೊಳ್ಳಲು ಬೇಕು ಎಂದರು.

ವಿಚಾರ ಸಂಕಿರಣದಲ್ಲಿ ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯ ಹಿರಿಯ ಸಹಾಯಕ ನಿದೇಶಕ ಎಚ್.ಎಲ್.ಮಂಜುನಾಥ, ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಎಸ್. ರಾಜೇಶ್, ವಿವಿಧ ಕಾಲೇಜುಗಳ ಅಧ್ಯಾಪಕರು, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.