ADVERTISEMENT

ನಾಳೆಯಿಂದ ಟೊಮೆಟೊ ಖರೀದಿ ಶುರು

100 ಟನ್ ಟೊಮೆಟೊ ಖರೀದಿಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2020, 19:45 IST
Last Updated 11 ಏಪ್ರಿಲ್ 2020, 19:45 IST
ತರಕಾರಿ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಟ್ಟಿರುವ ಟೊಮೊಟೊ
ತರಕಾರಿ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಟ್ಟಿರುವ ಟೊಮೊಟೊ   

ತುಮಕೂರು: ಜಿಲ್ಲೆಯ ರೈತರು ಬೆಳೆದಿರುವ ತರಕಾರಿ, ಹಣ್ಣುಗಳನ್ನು ತೋಟಗಾರಿಕಾ ಇಲಾಖೆ ಈಗಾಗಲೇ ಖರೀದಿಸಿ ಗ್ರಾಹಕ ಮನೆ ಬಾಗಿಲಿಗೆ ತಲುಪಿಸುತ್ತಿದ್ದು, ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೊರ ಜಿಲ್ಲೆ ಮತ್ತು ರಾಜ್ಯಗಳಿಗೆ ರೈತರ ಉತ್ಪನ್ನಗಳನ್ನು ಸಾಗಿಸಲು ಮುಂದಾಗಿದೆ.

ಎರಡು ದಿನಗಳಿಗೆ ಒಮ್ಮೆ 100 ಟನ್ ಟೊಮೆಟೊ ಖರೀದಿಸಿ ವಸಂತನರಸಾಪುರದ ಫುಡ್‌ಪಾರ್ಕ್‌ನಲ್ಲಿ ಸಂಗ್ರಹಿಸಲು ಸಿದ್ಧತೆ ನಡೆಸಿದ್ದು, ಸೋಮವಾರದಿಂದ ಈ ಕಾರ್ಯ ಆರಂಭವಾಗಲಿದೆ. ರೈತರೇ ಹಣ್ಣು ತಂದು ಕೊಡಬೇಕು. ಒಂದು ಕೆ.ಜಿ ಟೊಮೆಟೊಕ್ಕೆ ₹ 4.50 ಬೆಲೆ ನಿಗದಿಯಾಗಿದೆ. ಇದನ್ನು ಅಗತ್ಯವಿರುವ ಕಡೆಗಳಿಗೆ ರಫ್ತು ಮಾಡಲಾಗುತ್ತದೆ.

ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ 100 ಟನ್ ಟೊಮೆಟೊವನ್ನು ಜಿಲ್ಲಾ ತೋಟಗಾರಿಕಾ ಇಲಾಖೆಯಿಂದ ಖರೀದಿಸಿದ್ದಾರೆ. ಈ ಹಣ್ಣುಗಳನ್ನು ತಮ್ಮ ಕ್ಷೇತ್ರದಲ್ಲಿ ಜನರಿಗೆ ಉಚಿತವಾಗಿ ವಿತರಣೆ ಮಾಡಲಿದ್ದಾರೆ.

ADVERTISEMENT

ರೈತರಿಂದ ಖರೀದಿಸಿದ ತರಕಾರಿ, ಹಣ್ಣು ಮಾರಾಟಕ್ಕೆ ನಗರದಲ್ಲಿ 25 ಹಾಗೂ ತಾಲ್ಲೂಕುಗಳಿಗೆ ನಾಲ್ಕರಿಂದ ಐದು ವಾಹನಗಳ ವ್ಯವಸ್ಥೆ ಮಾಡಲಾಗಿದೆ.

‘ಇಲಾಖೆಯು ಈಗಾಗಲೇ ಸಹಾಯವಾಣಿ ಆರಂಭಿಸಿದೆ. ರೈತರು, ಗ್ರಾಹಕರು, ವ್ಯಾಪಾರಿಗಳು ಸಹಾಯವಾಣಿಗೆ ಕರೆ ಮಾಡಿ ಸಮಸ್ಯೆಗಳ ಬಗ್ಗೆ ತಿಳಿಸಬಹುದು’ ಎಂದು ತೋಟಗಾರಿಕಾ ಇಲಾಖೆ ಉಪನಿರ್ದೇಶಕ ರಘು ತಿಳಿಸಿದರು.

‘ತುಮಕೂರಿನಿಂದ ರಾಯಚೂರಿಗೆ ದಾಳಿಂಬೆ ಖರೀದಿಗೆ ತೆರಳುತ್ತಿದ್ದ ವ್ಯಾಪಾರಿ ಮಂಜುನಾಥ್ ಅವರನ್ನು ಶಿರಾ ಬಳಿ ತಡೆದಿದ್ದರು. ಪೈನಾಪಲ್ ಖರೀದಿಗೆ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಿಶೋರ್ ಶೆಟ್ಟಿ ಎಂಬುವರನ್ನು ಕುಣಿಗಲ್ ಬಳಿ ತಡೆದಿದ್ದರು. ಪೊಲೀಸರಿಗೆ ಕರೆ ಮಾಡಿ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಟ್ಟೆವು’ ಎಂದು ಮಾಹಿತಿ ನೀಡಿದರು.

ಪಾವಗಡ ತಾಲ್ಲೂಕಿನಲ್ಲಿ ಬೆಳೆದಿರುವ ತರಕಾರಿ, ಹಣ್ಣು ನೆರೆಯ ಆಂಧ್ರಪ್ರದೇಶದ ಅನಂತಪುರ, ಹಿಂದೂಪುರ ಮಾರುಕಟ್ಟೆಗೆ ರವಾನೆ ಆಗುತ್ತಿದೆ. ತುರುವೇಕೆರೆಯಲ್ಲಿ 500 ಟನ್ ಕಲ್ಲಂಗಡಿ ಇದೆ. ಇದಕ್ಕೆ ಸ್ಥಳೀಯ ಮಾರುಕಟ್ಟೆ ಒದಗಿಸುವ ಆಲೋಚನೆ ಇದೆ ಎಂದರು.

ಸಹಾಯವಾಣಿ
‘ಜಿಲ್ಲೆಯಲ್ಲಿ ರೈತರು ತರಕಾರಿ, ಹಣ್ಣು ಮಾರಾಟ ಮಾಡಲು ಇಲ್ಲವೆ, ಹೊರ ಜಿಲ್ಲೆಗಳ ವ್ಯಾಪಾರಿಗಳು ಜಿಲ್ಲೆಯಲ್ಲಿ ಖರೀದಿ ಪ್ರಕ್ರಿಯೆ ನಡೆಸಲು ಅಡ್ಡಿಯುಂಟಾದರೆ ತಕ್ಷಣವೇ ನನ್ನ ಸಂಪರ್ಕಿಸಬಹುದು’ ಎಂದು ತೋಟಗಾರಿಕಾ ಇಲಾಖೆ ಜಿಲ್ಲಾ ಉಪನಿರ್ದೇಶಕ ರಘು ತಿಳಿಸಿದ್ದಾರೆ.

ಸಂಪರ್ಕ ಸಂಖ್ಯೆ 9448999217. ಸಹಾಯವಾಣಿ 0816–2970310, 0816–2275189.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.