ತಿಪಟೂರು: ನಗರದ ಹಾಲ್ಕುರಿಕೆ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಸಾರ್ವಜನಿಕ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಕಳಪೆ ಆಹಾರ ನೀಡುತ್ತಿದ್ದಾರೆ ಎಂದು ಆರೋಪಿಸಿದ ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿ ನಿಲಯದಲ್ಲಿ ವೇಳಾಪಟ್ಟಿಯ ಪ್ರಕಾರ ಆಹಾರವನ್ನು ತಯಾರು ಮಾಡುತ್ತಾರೆ. ಆದರೆ ಇಲ್ಲಿ ಶುಚಿ ಹಾಗೂ ರುಚಿ ಇಲ್ಲ. ಶಾಲೆಗಳಿಂದ ಸ್ವಲ್ಪ ತಡವಾಗಿ ಬಂದರೆ ಊಟ ಖಾಲಿಯಾಗಿದೆ ಎಂದು ಹೇಳುತ್ತಾರೆ. ಮೊಟ್ಟೆಗಳನ್ನು ಕೂಡಿ ಎಂದು ಕೇಳಿದರೆ ಇಲ್ಲ ಎನ್ನುತ್ತಾರೆ. ಶೌಚಾಲಯಗಳು ಸ್ವಚ್ಛವಾಗಿರುವುದಿಲ್ಲ ಎಂದು ದೂರಿದರು.
ಬುಧವಾರ ಬೆಳಗ್ಗೆ ತಿಂಡಿ ಸಮಯದಲ್ಲಿ ಇಡ್ಲಿ ಮಾಡಲಾಗಿದೆ. ಆಹಾರವು ರಬ್ಬರ್‌ನಂತೆ ಬೇಯಿಸದೆ ನೀಡಿದ್ದಾರೆ. ಚಟ್ನಿಯನ್ನು ನೀರಿನಂತೆ ನೀಡಿದ್ದಾರೆ. ತಿನ್ನಲು ಸಾಧ್ಯವಾಗುತ್ತಿಲ್ಲ. ಇಲ್ಲಿನ ವಾರ್ಡನ್ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದರು.
ಸರ್ಕಾರದಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹಲವು ಸವಲತ್ತುಗಳನ್ನು ನೀಡಿದರೂ ಸಹ ಅದರ ನಿರ್ವಹಣೆಯಲ್ಲಿನ ವಾರ್ಡನ್ ವಿಫಲರಾಗಿದ್ದಾರೆ. ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕು ಎಂದು ಕರ್ನಾಟಕ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಹರೀಶ್‌ಗೌಡ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.