ಹುಳಿಯಾರು: ಪಟ್ಟಣದಲ್ಲಿ ಕಳೆದ ಏಳು ವರ್ಷಗಳಿಂದ ಕಸ ವಿಲೇವಾರಿ ಘಟಕಕ್ಕೆ ಸೂಕ್ತ ಜಾಗ ಒದಗಿಸದ ಮತ್ತು ಕಸದ ಸಮಸ್ಯೆಯನ್ನು ಬಗೆಹರಿಸದ ಜಿಲ್ಲಾಡಳಿತದ ವಿರುದ್ಧ ಹಾಗೂ ಸ್ಥಳೀಯ ಸಮಸ್ಯೆಗಳ ಬಗೆಹರಿಸದ ಪಟ್ಟಣ ಪಂಚಾಯಿತಿ ಆಡಳಿತದ ವಿರುದ್ಧ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಸೋಮವಾರ ವಿನೂತನ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು, ಮಹಿಳೆಯರು, ಸ್ಥಳೀಯರು ಭಾಗವಹಿಸಿ, ಮಹಿಳೆಯರು ಮನೆಯಿಂದ ತಂದಿದ್ದ ಕಸವನ್ನು ಉಡುಗೊರೆ ರೂಪದಲ್ಲಿ ಪ್ಯಾಕ್ ಮಾಡಿ ಕೊರಿಯರ್ ಮೂಲಕ ಅಧಿಕಾರಿಗಳಿಗೆ ರವಾನಿಸಲಾಯಿತು.
ಪಟ್ಟಣ ಪಂಚಾಯಿತಿ ಕಾರ್ಯಾಲಯದ ಮುಂದೆ ಈಗಾಗಲೇ ರೈತ ಸಂಘ 5 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದೆ. ಅದಕ್ಕೆ ಬೆಂಬಲ ಸೂಚಿಸಿ ಕೆಆರ್‌ಎಸ್ ಪಕ್ಷ ಪ್ರತಿಭಟನೆಗೆ ಮುಂದಾಯಿತು. ಪಟ್ಟಣ ಪಂಚಾಯಿತಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಆಡಳಿತದ ವಿರುದ್ಧ ಘೋಷಣೆ ಕೂಗಿದರು.
ಕೆಆರ್‌ಎಸ್ ಕಾರ್ಯಕರ್ತ ಭಟ್ಟರಹಳ್ಳಿ ಮಲ್ಲಿಕಾರ್ಜುನ್ ಮಾತನಾಡಿ, ‘ಹುಳಿಯಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಏಳು ವರ್ಷಗಳಿಂದ ಕಸ ವಿಲೇವಾರಿ ಘಟಕಕ್ಕೆ ಜಾಗ ಗುರುತಿಸಲು ಸಾಧ್ಯವಾಗಿಲ್ಲ. ಈ ಕುರಿತು ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕಸ ವಿಲೇವಾರಿಗೆ ಸೂಕ್ತ ಸೌಲಭ್ಯ ನೀಡದೆ, ಪಟ್ಟಣ ಪಂಚಾಯಿತಿ ಸಾರ್ವಜನಿಕರಿಂದ ಕಡ್ಡಾಯವಾಗಿ ತೆರಿಗೆ ವಸೂಲಿ ಮಾಡುತ್ತಿದೆ’ ಎಂದು ಆರೋಪಿಸಿದರು.
ಅಧಿಕಾರಿಗಳಿಗೆ ಕಸವನ್ನು ದೀಪಾವಳಿ ಉಡುಗೊರೆಯಾಗಿ ಕಳುಹಿಸುತ್ತಿದ್ದೇವೆ. ಇದು ಕರ್ತವ್ಯ ನಿರ್ಲಕ್ಷ್ಯ ಮಾಡಿದ ಅಧಿಕಾರಿಗಳಿಗೆ ಜನರು ವ್ಯಕ್ತಪಡಿಸುತ್ತಿರುವ ಅಸಮಾಧಾನದ ಸಂಕೇತವಾಗಿದೆ. ಅಧಿಕಾರಿಗಳಿಗೆ ಈಗಲಾದರೂ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.