ADVERTISEMENT

ಸಂತೆ ಮೈದಾನದಲ್ಲಿ ಮೂಲ ಸೌಕರ್ಯ ಕೊರತೆ: ರೈತ ಸಂಘದ ಪ್ರತಿಭಟನೆ 6ನೇ ದಿನಕ್ಕೆ

ನಾಲ್ಕು ದಿನದ ನಂತರ ಉಪವಾಸ ಸತ್ಯಾಗ್ರಹದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 7:02 IST
Last Updated 15 ಅಕ್ಟೋಬರ್ 2025, 7:02 IST
ಹುಳಿಯಾರು ಪಟ್ಟಣ ಪಂಚಾಯಿತಿ ಕಚೇರಿ ಎದುರು ರೈತಸಂಘದ ಪದಾಧಿಕಾರಿಗಳು ಮಂಗಳವಾರ ಭಜನಾ ತಂಡದೊಂದಿಗೆ ಭಜನೆ ನಡೆಸಿದರು
ಹುಳಿಯಾರು ಪಟ್ಟಣ ಪಂಚಾಯಿತಿ ಕಚೇರಿ ಎದುರು ರೈತಸಂಘದ ಪದಾಧಿಕಾರಿಗಳು ಮಂಗಳವಾರ ಭಜನಾ ತಂಡದೊಂದಿಗೆ ಭಜನೆ ನಡೆಸಿದರು   

ಹುಳಿಯಾರು: ಸಂತೆ ಮೈದಾನದಲ್ಲಿ ಮೂಲ ಸೌಕರ್ಯ ಕಲ್ಪಿಸುವಲ್ಲಿ ಪಟ್ಟಣ ಪಂಚಾಯಿತಿ ನಿರ್ಲಕ್ಷ್ಯವಹಿಸಿರುವ ಬಗ್ಗೆ ರೈತ ಸಂಘದ ಅಧ್ಯಕ್ಷ ಚಂದ್ರಪ್ಪ ನೇತೃತ್ವದಲ್ಲಿ ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ನಡೆಯುತ್ತಿರುವ ಪ್ರತಿಭಟನೆ ಮಂಗಳವಾರ ಆರನೇ ದಿನಕ್ಕೆ ಕಾಲಿಟ್ಟಿತು. 

‘ಕರ ನಿರಾಕರಣೆ ಚಳುವಳಿ’ ಹಾಗೂ ಪ್ರತಿಭಟನೆ ಆರಂಭಿಸಿ ಆರು ದಿನಗಳು ಕಳೆದರೂ ಪ್ರತಿಭಟನಾ ಸ್ಥಳಕ್ಕೆ ಬಾರದ ಶಾಸಕರು ಮತ್ತು ಪಟ್ಟಣ ಪಂಚಾಯಿತಿ ಅಧಿಕಾರಿಗಳ ಕಾರ್ಯವೈಖರಿಯನ್ನು ಹೊಸಹಳ್ಳಿ ಚಂದ್ರಪ್ಪ ಟೀಕಿಸಿದರು.

ಪಟ್ಟಣ ಪಂಚಾಯಿತಿ ಜೀವಂತವಾಗಿಲ್ಲ, ಕೇವಲ ‘ಕಲ್ಕಟ್ಟಡ’ ಮತ್ತು ನಾಮಕಾವಸ್ಥೆ ಕಚೇರಿ ಎಂದು ದೂರಿದರು. ರೈತ ಹೋರಾಟಕ್ಕೆ ಜಿಲ್ಲಾಡಳಿತ, ಶಾಸಕರು ಮತ್ತು ತಹಶೀಲ್ದಾರ್ ತಕ್ಷಣ ಬಂದು ಸಮಸ್ಯೆ ಆಲಿಸಬೇಕಿತ್ತು. ಆದರೆ ತಹಶೀಲ್ದಾರರು ರಾಜಕಾರಣ ಮಾಡುತ್ತಾ ಶಾಸಕರ ಹಿಂದೆ ತಿರುಗಾಡುತ್ತಿದ್ದಾರೆ ಎಂದು ಟೀಕಿಸಿದರು.

ADVERTISEMENT

​ಉಪವಾಸ ಸತ್ಯಾಗ್ರಹದ ಎಚ್ಚರಿಕೆ: ಬೇಡಿಕೆಗಳು ಈಡೇರುವವರೆಗೂ ಹೋರಾಟ ಮೊಟಕುಗೊಳಿಸುವುದಿಲ್ಲ ಎಂದು ಗಟ್ಟಿ ನಿಲುವನ್ನು ವ್ಯಕ್ತಪಡಿಸಿದರು. ನಾಲ್ಕು ದಿನದ ಗಡುವು ನೀಡಿದ ಅವರು ನಾಲ್ಕು ದಿನಗಳಲ್ಲಿ ಯಾರೂ ಸ್ಪಂದಿಸದಿದ್ದಲ್ಲಿ, ಪ್ರತಿಭಟನೆಯ 11ನೇ ದಿನದಿಂದ ಉಪವಾಸ ಕೂರುವ ಮೂಲಕ ಚಳವಳಿಯನ್ನು ಉಗ್ರರೂಪಕ್ಕೆ ಕೊಂಡೊಯ್ಯುತ್ತೇವೆ ಎಂದು ಎಚ್ಚರಿಕೆ ನೀಡಿದರು.

ರೈತರು ಬೆಳಗ್ಗೆಯಿಂದ ಪಟ್ಟಣ ಪಂಚಾಯಿತಿ ಮುಂದೆ ಭಜನಾ ತಂಡದೊಂದಿಗೆ ತಾಳಮೇಳದೊಂದಿಗೆ ತತ್ವಪದ ಹಾಗೂ ಭಜನೆ ನಡೆಸಿದರು.

ತಾಲ್ಲೂಕು ಅಧ್ಯಕ್ಷ ಕರಿಯಪ್ಪ, ಸೋಮಜ್ಜನ ಪಾಳ್ಯದ ಬೀರಲಿಂಗಯ್ಯ, ಕಲ್ಲಹಳ್ಳಿ ಮಲ್ಲೇಶಯ್ಯ, ನೀರಾ ಈರಣ್ಣ, ಜಗದೀಶ್, ಪ್ರಶಾಂತ್, ಸೀಗೆಬಾಗಿ ಮಂಜುನಾಥ್, ಆಶಾ, ಲಕ್ಷ್ಮಿ ಸೇರಿದಂತೆ ಹಾಗೂ ರೈತರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.