ತುರುವೇಕೆರೆ: 2028ರ ವಿಧಾನಸಭಾ ಚುನಾವಣೆಯಲ್ಲಿ ತುರುವೇಕೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾನೇ. ಈ ಬಗ್ಗೆ ಕಾರ್ಯಕರ್ತರಲ್ಲಿ ಯಾವುದೇ ಗೊಂದಲ ಬೇಡ’ ಎಂದು ಮಾಜಿ ಶಾಸಕ ಮಸಾಲ ಜಯರಾಂ ಸ್ಪಷ್ಟಪಡಿಸಿದರು.
ಚಿಕ್ಕೋನಹಳ್ಳಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ರಾಷ್ಟ್ರ ಮತ್ತು ರಾಜ್ಯದ ಬಿಜೆಪಿ ನಾಯಕರು ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುವಂತೆ ಸೂಚಿಸಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನೀನೇ ಅಭ್ಯರ್ಥಿಯಾಗಬೇಕು ಎಂದು ಹುಕುಂ ಹೊರಡಿಸಿದ್ದಾರೆ ಎಂದರು.
ಕೆಲವು ವೈಯಕ್ತಿಕ ಕಾರಣಗಳಿಂದಾಗಿ ಪಕ್ಷ ಸಂಘಟನೆಯನ್ನು ಚುರುಕುಗೊಳಿಸಿರಲಿಲ್ಲ. ಈಗ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಬರಲಿದ್ದು, ಸಂಘಟನೆಯಲ್ಲಿ ತೊಡಗಿಕೊಳ್ಳಲಾಗುವುದು. ವಿಧಾನಸಭೆ ಚುನಾವಣೆಯೂ ಬೇಗನೆ ಬರಬಹುದು. ಸಿಎಂ ಕುರ್ಚಿ ಕದನದಲ್ಲಿ ಯಾವುದೇ ಕ್ಷಣದಲ್ಲಿ ಕಾಂಗ್ರೆಸ್ ಸರ್ಕಾರ ಬೀಳಬಹುದು. ಬಿಜೆಪಿ ಕಾರ್ಯಕರ್ತರು ಚುನಾವಣೆ ಎದುರಿಸಲು ಸನ್ನದ್ಧರಾಗಿ ಎಂದರು.
ಮುಂಬರುವ ದಿನಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಇರಲಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಮಾಜಿ ಶಾಸಕ ಮಸಾಲ ಜಯರಾಂ, ‘ನನಗೆ ಗೊತ್ತಿಲ್ಲ. ಅದನ್ನು ವರಿಷ್ಠರು ತೀರ್ಮಾನಿಸುತ್ತಾರೆ. ಈಗ ಪಕ್ಷ ಸಂಘಟನೆ ಮಾಡುವುದು ಮತ್ತು ಮುಂಬರುವ ಚುನಾವಣೆಗೆ ಈಗಿನಿಂದಲೇ ತಯಾರಿ ಆಗುವಂತೆ ಆದೇಶಿಸಿದ್ದಾರೆ’ ಎಂದರು.
ಇತ್ತೀಚೆಗೆ ನಡೆದ ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ ಅವರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಎಂ.ಟಿ.ಕೃಷ್ಣಪ್ಪ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಮುಂಬರುವ ವಿಧಾನಸಭಾ ಚುನಾವಣೆಗೆ ತಾವೇ ಸ್ಪರ್ಧಿಸಬೇಕು ಎಂದು ಒತ್ತಾಯಿಸುತ್ತಿರುವುದರಿಂದ ತಾವು ಚುನಾವಣೆಗೆ ಸ್ಪರ್ಧಿಸುತ್ತಿರುವುದಾಗಿ ಹೇಳಿದ್ದರು. ಅಲ್ಲದೇ ಸಂಸದ ವಿ.ಸೋಮಣ್ಣ ಎಂ.ಟಿ.ಕೃಷ್ಣಪ್ಪ ಅವರಿಗೆ ಮಂತ್ರಿಯಾಗುವ ಕನಸಿದೆ. ಅದು ಈಡೇರಲಿ ಎಂದು ಪರೋಕ್ಷವಾಗಿ ಮುಂಬರುವ ಚುನಾವಣೆಯಲ್ಲೂ ಎಂ.ಟಿ.ಕೃಷ್ಣಪ್ಪ ಅವರೇ ಸ್ಪರ್ಧಿಸಲಿ ಎಂದು ಹೇಳಿದ್ದರು. ಇದರಿಂದ ಗೊಂದಲಕ್ಕೆ ಈಡಾಗಿದ್ದ ಬಿಜೆಪಿ ಕಾರ್ಯಕರ್ತರಿಗೆ ಧೈರ್ಯ ತುಂಬಿದ ಮಸಾಲ ಜಯರಾಂ, ಟಿಕೆಟ್ ಯಾರಿಗೂ ಘೋಷಣೆ ಆಗಿಲ್ಲ. ಎಂ.ಟಿ.ಕೃಷ್ಣಪ್ಪ ವೈಯಕ್ತಿಕವಾಗಿ ಘೋಷಣೆ ಮಾಡಿಕೊಂಡಿರಬಹುದು. ಅವರು ಹೇಗೆ ತಮ್ಮ ಪಕ್ಷ ಸಂಘಟನೆ ಮಾಡುತ್ತಿದ್ದಾರೊ ಹಾಗೆಯೇ ನಾವೂ ಸಹ ಪಕ್ಷ ಸಂಘಟನೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಮೃತ್ಯುಂಜಯ, ಅರಳೀಕೆರೆ ಶಿವಯ್ಯ, ಉಗ್ರಯ್ಯ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸ್ವಪ್ನಾ ನಟೇಶ್, ಉಪಾಧ್ಯಕ್ಷೆ ಭಾಗ್ಯಮ್ಮ, ಸದಸ್ಯರಾದ ಆಶಾ ರಾಜಶೇಖರ್, ಚಿದಾನಂದ್, ಶೀಲಾ ಶಿವಪ್ಪ, ಬುಗುಡನಹಳ್ಳಿ ಕೃಷ್ಣಮೂರ್ತಿ, ಸೋಮೇನಹಳ್ಳಿ ಜಗದೀಶ್, ಪ್ರಸಾದ್, ಚೂಡಾಮಣಿ, ಉಮಾ ರಾಜ್, ಶೋಭಾ, ದಬ್ಬೇಘಟ್ಟ ಮಹೇಶ್, ನವೀನ್ ಬಾಬು, ಜಗದೀಶ್, ಪ್ರಕಾಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.